ಮಂಡ್ಯದ ನಾಗಮಂಗಲ ಗಲಭೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕರ್ನಾಟಕ ಕಾಂಗ್ರೆಸ್ ಸರ್ಕಅರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ ಸಿದ್ದರಾಮಯ್ಯರನ್ನು ಸರ್ವಾಧಿಕಾರಿ ಹಿಟ್ಲರ್ಗೆ ಹೋಲಿಸಿದ ಅವರು, ಗೊಡ್ಡು ಬೆದರಿಕೆಗಳಿಗೆ ಹೆದರಿ ಓಡಿಹೋಗಲ್ಲ. ಎದುರಿಸುತ್ತೇವೆ ಎಂದಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಟ್ಲರ್ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಹರೀಶ್ ಪೂಂಜ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಶಾಸಕ, ಸಂಸದರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹಾಗೆಂದು ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ನೀಡಿದ ಹೇಳಿಕೆ ಮೇಲೆ ಕ್ರಮ ಆಗಲಿಲ್ಲ ಎಂದರು.
ಪೊಲೀಸ್ ಅಧಿಕಾರಿ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕಾಂಗ್ರೆಸ್ ಶಾಸಕರ ಮೇಲೆ ಕ್ರಮ ಆಗಲಿಲ್ಲ. ಮಾಜಿ ಸಚಿವ ನಾಗೇಂದ್ರ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆದರೆ ಎಸ್ಐಟಿ ಚಾರ್ಜ್ಶೀಟ್ನಲ್ಲಿ ಅವರ ಹೆಸರೇ ಇಲ್ಲ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ ಎಂದು ಶೋಭಾ ಪ್ರಶ್ನಿಸಿದರು.
ಗಣೇಶ ಮೂರ್ತಿಯನ್ನೇ ಪೊಲೀಸ್ ವ್ಯಾನ್ನಲ್ಲಿ ಕರೆದುಕೊಂಡು ಹೋದರು. ಇದು ದೇಶದಲ್ಲೇ ಮೊದಲು. ಗಣಪತಿಗೇ ವಿಘ್ನ ಮಾಡಿದರು. ಚಪ್ಪಲಿ ಬಿಸಾಡಿದರು, ಕಲ್ಲು ಎಸೆದರು, 25 ಅಂಗಡಿ ಸುಟ್ಟು ಹಾಕಿದರು. ಅವರಿಗೆ ಎಲ್ಲಿಂದ ಶಕ್ತಿ ಬಂತು? ಕೇರಳದವರು ಬಂದಿದ್ದಾರೆ ಎಂದಬುದು ಗೊತ್ತಾಗಿದೆ ಎಂದು ಶೋಭಾ ಆಕ್ರೋಶ ವ್ಯಕ್ತಪಡಿಸಿದರು.