ಬೆಂಗಳೂರು : ಈ ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣವೇ? ಎಲ್ಲದಕ್ಕೂ ನಾನೇ ಹೊಣೆಯೇ? ಸಿ.ಟಿ. ರವಿ ಅವರ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಸಿ.ಟಿ. ರವಿ ಅವರ ಮೇಲೆ ಪೊಲೀಸ್ ಕ್ರಮ ತೆಗೆದುಕೊಳ್ಳುವ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಭಾವ ಬೀರಿದ್ದಾರೆ ಎನ್ನುವ ಬಿಜೆಪಿಯವರ ಆರೋಪಕ್ಕೆ ಅವರು ಈ ರೀತಿ ತಿರುಗೇಟು ನೀಡಿದರು. ಕ್ರಮ ತೆಗೆದುಕೊಳ್ಳಲು ಪೊಲೀಸರಿದ್ದಾರೆ, ಕಾನೂನಿದೆ. ಅವರು ಯಾವ, ಯಾವ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಇದರಲ್ಲಿ ನಮ್ಮ ಯಾವ ಹಸ್ತಕ್ಷೇಪವೂ ಇಲ್ಲ. ಅವರುಂಟು, ಕಾನೂನು ಹಾಗೂ ಪೊಲೀಸರುಂಟು” ಎಂದರು.
ಜಾಮೀನು ಸಿಕ್ಕಿರುವುದು ಮೊದಲ ಗೆಲುವು ಎಂದು ಸಿ.ಟಿ. ರವಿ ಅವರು ಹೇಳಿದ್ದಾರೆ ಎಂದಾಗ, “ತಾಯಿಗೆ, ಹೆಣ್ಣು ಕುಲಕ್ಕೆ, ನಮ್ಮ ಸಂಸ್ಕೃತಿಗೆ ಆಗಿರುವ ಅವಮಾನದ ಬಗ್ಗೆ ಮೊದಲು ಉತ್ತರ ನೀಡಲಿ” ಎಂದು ತಿರುಗೇಟು ನೀಡಿದರು.“ಬಿಜೆಪಿ ನಾಯಕ ಸಿ.ಟಿ ರವಿ ಅವರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಲಾದ ದೊಡ್ಡ ಅಪಮಾನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಈ ವ್ಯಕ್ತಿಯಿಂದ ಇಂತಹ ಪ್ರವೃತ್ತಿ ಇದೇ ಮೊದಲಲ್ಲ. ಸಿದ್ದರಾಮಯ್ಯ ಅವರು, ಜಯಮಾಲ, ಸೇರಿದಂತೆ ನಮ್ಮ ನಾಯಕರ ಬಗ್ಗೆ ಈ ಹಿಂದೆ ಅನೇಕ ಬಾರಿ ಹೀನಾಯವಾಗಿ ಮಾತನಾಡಿದ್ದಾರೆ. ಸಿ.ಟಿ. ರವಿ ಅವರ ಹೇಳಿಕೆ ಹಾಗೂ ನಡತೆ ಸರಿಯೋ ತಪ್ಪೋ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಲಿ. ಪೊಲೀಸರ ವಿಚಾರ ನಂತರ ಮಾತನಾಡೋಣ. ಅದನ್ನು ಬಿಟ್ಟು ಪೊಲೀಸರ ಮೇಲೆ ದೂರು ನೀಡುವುದಲ್ಲ. ಪೊಲೀಸರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ” ಎಂದು ತಿಳಿಸಿದರು.