Wednesday, January 28, 2026
18.8 C
Bengaluru
Google search engine
LIVE
ಮನೆರಾಜಕೀಯಸರ್ಕಾರಿ ಗೌರವಗಳೊಂದಿಗೆ, ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ

ಸರ್ಕಾರಿ ಗೌರವಗಳೊಂದಿಗೆ, ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ

ದಾವಣಗೆರೆ: ರಾಜಕೀಯ ಮುತ್ಸದ್ದಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್​​​ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿಧಿವಶರಾಗಿದ್ದು, ಸಕಲ ಗೌರಗಳೊಂದಿಗೆ ಕ್ರಿಯಾಸಮಾಧಿ ಮಾಡಲಾಗಿದೆ. ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.

ದಾವಣೆಗೆರೆಯ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಪತ್ನಿ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಣ್ಣಿನ ಬದಲಿಗೆ ವಿಭೂತಿ ಗಟ್ಟಿಗಳೊಂದಿಗೆ ಪಂಚಪೀಠದ ಸ್ವಾಮೀಜಿಗಳು ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಿದರು. ಶಾಮನೂರು ಪುತ್ರ ಎಸ್‌.ಎಸ್‌ ಮಲ್ಲಿಕಾರ್ಜುನ ಅವರೂ ಇದರಲ್ಲಿ ಪಾಲ್ಗೊಂಡರು.

ಅಂತ್ಯಕ್ರಿಯೆಯ ವೇಳೆ ಶಾಮನೂರರ ಪಾರ್ಥಿವ ಶರೀರಕ್ಕೆ ಪೊಲೀಸರು ತ್ರಿವರ್ಣ ಧ್ವಜ ಹೊದಿಸಿ ಗೌರವ ಸೂಚಿಸಿದರು, ಇದಾದಮೇಲೆ ಶಾಮನೂರು ಪುತ್ರ ಧ್ಚಜ ಸ್ವೀಕರಿಸಿದರು. ನಂತರ ರಾಷ್ಟ್ರಗೀತೆಯೊಂದಿಗೆ ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ವಿಶೇಷ ಗೌರವ ಸಲ್ಲಿಸಿದರು. ಬಳಿಕ ವಾದ್ಯವಂದನೆ ಅರ್ಪಿಸಿ, ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ರಾಜಕೀಯ ಗಣ್ಯರಾದ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಸಚಿವರಾದ ಕೆಜೆ ಜಾರ್ಜ್, ಆರ್.ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್, ಸುಧಾಕರ್, ಈಶ್ವರ್ ಖಂಡ್ರೆ, ಬಸವರಾಜ ರಾಯರಡ್ಡಿ, ವಿಜಯಾನಂದ ಕಾಶಪ್ಪನವರ್, ವಿಪಕ್ಷ ನಾಯಕ ಆರ್‌. ಅಶೋಕ್‌, ಸಿ.ಟಿ ರವಿ, ಸಿರಿಗೆರೆ ಶ್ರೀಗಳು, ವಚನಾನಂದಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಚರ್ಚ್‌ ಪಾದ್ರಿಗಳು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ಸ್ಥಳೀಯ ಪೊಲೀಸ್ ಇಲಾಖೆಯಿಂದ ವಿಐಪಿಗಳಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ಮಾವನ ಅಂತ್ಯಸಂಸ್ಕಾರಕ್ಕೆ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರು ನಂದಾದೀಪ ಹಿಡಿದು ತಂದರು. ಕುಟುಂಬಸ್ಥರು ಬಿಲ್ವಪತ್ರೆ, ಬಾಳೆ ಎಲೆ, ವಿಭೂತಿಯ ಸಿದ್ಧತೆ ಮಾಡಿಕೊಂಡಿದ್ದರು. ಇದರೊಂದಿಗೆ ಸಿದ್ಧಗಂಗಾ ಮಠದಿಂದ 100 ವಿಭೂತಿಗಟ್ಟಿಗಳನ್ನೂ ಕಳಿಸಿಕೊಡಲಾಗಿತ್ತು. ಬಿದಿರು ಪಲ್ಲಕ್ಕಿಯಲ್ಲಿ ಪಾರ್ಥೀವ ಶರೀರ ಅಂತ್ಯಕ್ರಿಯೆಯ ಸ್ಥಳ ತಲುಪುತ್ತಿದ್ದಂತೆ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ಜರುಗಿದವು. ಇಹಲೋಕ ತ್ಯಜಿಸಿದವರಿಗೆ ಮೋಕ್ಷಸಿಗಲಿ ಎನ್ನುವ ನಿಟ್ಟಿನಲ್ಲಿ ಅರ್ಚಕರು ವಿಧಿವಿಧಾನ ನೆರವೇರಿಸಿದರು.

ಇನ್ನೂ ಪಾರ್ಥೀವ ಶರೀರ ಮೆರವಣಿಗೆ ಹಿನ್ನೆಲೆ ಮಾರ್ಗದುದ್ದಕ್ಕೂ ಶಾಮನೂರರ ಫ್ಲೆಕ್ಸ್‌ಗಳನ್ನ ಅಳವಡಿಸಲಾಗಿತ್ತು. ಕ್ಷೇತ್ರದ ನೆಚ್ಚಿನ ಜನನಾಯಕನನ್ನ ಕಳೆದುಕೊಂಡು ಜನ ಕಣ್ಣೀರು ಹಾಕಿದ್ರು. ಇನ್ನೂ ಕೆಲವರು ಪಾರ್ಥೀವ ಶರೀರವಿದ್ದ ವಾಹನಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ರು.

1931ರ ಜೂನ್ 16ರಂದು ದಾವಣಗೆರೆಯಲ್ಲಿ ಜನಿಸಿದ್ದ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಧಾನಸಭೆಯ ಸದಸ್ಯರಾಗಿದ್ದು, ಅವರು ಭಾರತದಲ್ಲಿ ರಾಜ್ಯ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದು, ನೆಚ್ಚಿನ ಜನನಾಯಕನನ್ನ ಕಳೆದುಕೊಂಡು ಜನ ಕಣ್ಣೀರು ಹಾಕಿದ್ರು..

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments