
ಭೂ ಹಗರಣದಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸದ್ಯಕ್ಕೆ ನಿರಾಳರಾಗಿದ್ದಾರೆ. ಯಡಿಯೂರಪ್ಪ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಇವತ್ತು ತೀರ್ಪು ನೀಡಿಲ್ಲ. ಇವತ್ತು ಮಧ್ಯಾಹ್ನ 12.45ಕ್ಕೆ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ ಪೀಠ ತೀರ್ಪು ನೀಡಬೇಕಿತ್ತು. ಆದರೆ ಯಡಿಯೂರಪ್ಪ ಸಲ್ಲಿಸಿದ್ದ ಮೇಲ್ಮನವಿ ರೀತಿಯ ಇತರೆ ಪ್ರಕರಣಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ನ ಇತರೆ ದ್ವಿಸದಸ್ಯ ನ್ಯಾಯಪೀಠಗಳು ತೀರ್ಪು ನೀಡಿಲ್ಲ. ಇಂಥದ್ದೇ ಇತರ ಪ್ರಕರಣಗಳ ವಿಚಾರಣೆಯನ್ನು ವಿಸ್ಕೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಯಡಿಯೂರಪ್ಪ ಪ್ರಕರಣದಲ್ಲಿ ತೀರ್ಪು ನೀಡದೇ ಯಡಿಯೂರಪ್ಪ ಪ್ರಕರಣವನ್ನು ವಿಸ್ಕೃತ ಪೀಠಕ್ಕೆ ವರ್ಗಾಯಿಸುವ ಸಂಬಂಧ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಲಾಗಿದೆ ಎಂದು ಇವತ್ತು ದ್ವಿಸದಸ್ಯ ಪೀಠ ಹೇಳಿದೆ.
ಸಾರ್ವಜನಿಕ ಸೇವೆಯಲ್ಲಿರುವವರು ಎಸಗುವ ಭ್ರಷ್ಟಾಚಾರ ಸಂಬಂಧ ತನಿಖೆಗೆ ಆದೇಶ ನೀಡುವ ಮೊದಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅಂತಹ ಸಾರ್ವಜನಿಕ ಸೇವಕನ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವೇ..? ಸಾರ್ವಜನಿಕ ಸೇವೆಯಲ್ಲಿದ್ದವರು ಆ ಹುದ್ದೆಯಿಂದ ಇಳಿದ ಬಳಿಕ ಅವರ ವಿರುದ್ಧದ ತನಿಖೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸುವ ಮೊದಲು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯವೇ..? ಅಂತಹ ಸಾರ್ವಜನಿಕ ಸೇವಕ ಹುದ್ದೆಯಿಂದ ಇಳಿದ ಬಳಿಕ ಸಲ್ಲಿಕೆ ಆಗುವ ತನಿಖಾ ವರದಿ ಆಧರಿಸಿ ವಿಚಾರಣೆ ಆರಂಭಿಸುವುದಕ್ಕೆ ಸಕ್ಷಮ ಪ್ರ್ರಾಧಿಕಾರದಿಂದ ಪೂರ್ವಾನುಮತಿ ಅನಿವಾರ್ಯವೇ..? ಇಂಥದ್ದೇ ಪ್ರಶ್ನೆಗಳೊಂದಿಗೆ 2018 ಮತ್ತು 2024ರಲ್ಲಿ ಎರಡು ದ್ವಿಸದಸ್ಯ ಪೀಠಗಳು 2 ಪ್ರತ್ಯೇಕ ಪ್ರಕರಣವನ್ನು ಸುಪ್ರೀಂಕೋರ್ಟ್ನ ವಿಸ್ಕೃತ ಪೀಠಕ್ಕೆ ವರ್ಗಾಯಿಸಿದ್ದವು. ಆ ಪ್ರಕರಣಗಳ ಜೊತೆಗೆ ಯಡಿಯೂರಪ್ಪ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಕೂಡಾ ವಿಸ್ತೃತ ಪೀಠಕ್ಕೆ ವರ್ಗಾವಾಗಿದೆ.
ಏನಿದು ಯಡಿಯೂರಪ್ಪ ಪ್ರಕರಣ..?
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ, ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದ ವೇಳೆ ಆಲಂ ಪಾಷಾ ಎಂಬವರಿಗೆ ಕೆಐಎಡಿಬಿ ಮೂಲಕ 26 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಆದರೆ ಅದಾದ ಬಳಿಕ ಆ 26 ಎಕರೆ ಮಂಜೂರಾತಿಯನ್ನು ಹಿಂಪಡೆಯುವಂತೆ ಸ್ವತಃ ಆಲಂಪಾಷಾ ಅವರೇ ಪತ್ರ ಬರೆದಿದ್ದಾರೆ ಎಂಬಂತೆ ಅವರ ಹೆಸರಲ್ಲಿ ನಕಲಿ ಪತ್ರವನ್ನು ಸೃಷ್ಟಿಸಿ ಕ್ರಿಮಿನಲ್ ಸಂಚಿನ ಮೂಲಕ ಮಂಜೂರಾಗಿದ್ದ ಭೂಮಿಯನ್ನು ಡಿನೋಟಿಫೈ ಮಾಡಲಾಗಿತ್ತು. ಆಲಂಪಾಷಾ ಸಲ್ಲಿಸಿದ ದಾವೆಯಡಿಯಲ್ಲಿ 2012ರಲ್ಲಿ ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಕ್ಕೆ ಬೆಂಗಳೂರಿನ ನ್ಯಾಯಾಲಯ ಅರ್ಜಿ ಆದೇಶಿಸಿತ್ತು. ಲೋಕಾಯುಕ್ತ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿತ್ತು. ಲೋಕಾಯುಕ್ತ ತನಿಖೆಯನ್ನು ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ತನಿಖೆಗೂ ಮೊದಲು ರಾಜ್ಯಪಾಲರ ಪೂರ್ವಾನುಮತಿ ಪಡೆಯಲಾಗಿಲ್ಲ ಎಂಬ ಕಾರಣಕ್ಕೆ ಲೋಕಾಯುಕ್ತ ತನಿಖೆಯನ್ನು ರದ್ದುಗೊಳಿಸಲಾಗಿತ್ತು.
ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಇಳಿದ ಬಳಿಕ 2014ರಲ್ಲಿ ಆಲಂ ಪಾಷಾ ಎರಡನೇ ಬಾರಿಗೆ ಇದೇ ಹಗರಣ ಸಂಬಂಧ ದೂರನ್ನು ನೀಡಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಹಗರಣದ ವಿಚಾರಣೆಗೆ ರಾಜ್ಯಪಾಲರ ಪೂರ್ವಾನುಮತಿ ಅಗತ್ಯ ಇಲ್ಲ ಎಂದು ಆಲಂಪಾಷಾ ವಾದಿಸಿದ್ದರು. ಆದರೆ 2ನೇ ಬಾರಿಯೂ ವಿಚಾರಣಾ ನ್ಯಾಯಾಲಯ ರಾಜ್ಯಪಾಲರಿಂದ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ದೂರನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಆಲಂಪಾಷಾ ಅವರು ಕರ್ನಾಟಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. 2021ರ ಜನವರಿಯಲ್ಲಿ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ ಯಡಿಯೂರಪ್ಪ, ಮುರುಗೇಶ್ ನಿರಾಣಿ ಮತ್ತು ಇತರರ ವಿರುದ್ಧದ ವಿಚಾರಣೆಗೆ ಅನುಮತಿ ನೀಡಿ ತೀರ್ಪು ನೀಡಿತ್ತು. ಕರ್ನಾಟಕ ಹೈಕೋರ್ಟ್ನ ತೀರ್ಪನ್ನು ಪ್ರಶ್ನಿಸಿ ಯಡಿಯೂರಪ್ಪ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.




