ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹತ್ಯಾ ಪ್ರಯತ್ನ ಮಾಡಿದ ವ್ಯಕ್ತಿಯನ್ನು ಘಟನೆ ನಡೆದ 70 ಗಂಟೆಗಳ ಬಳಿಕ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳ್ಳಂಬೆಳಿಗ್ಗೆ ಮುಂಬೈ ಬಳಿಯ ಥಾಣೆಯಲ್ಲಿ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ಮುಖ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ 9 ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿ ನಡೆಸಿದ ಮುಂಬೈ ಮಹಾನಗರ ವಿಭಾಗ-9ರ ಡಿಸಿಪಿ ದೀಕ್ಷಿತ್ ಗೆಡಾಮ್ ಮಾಹಿತಿ ನೀಡಿದರು.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿಯು ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದು, ಇಂದು ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಿ ಆ ನಂತರ ವಶಕ್ಕೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈಗ ಬಂಧನವಾಗಿರುವ ಆರೋಪಿ ಮುಂಬೈನ ಪಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಈತ ಇಲ್ಲಿ ಹೆಸರು ಬದಲಾವಣೆ ಮಾಡಿಕೊಂಡು ಓಡಾಡುತ್ತಿದ್ದನಂತೆ.