Wednesday, November 19, 2025
24.2 C
Bengaluru
Google search engine
LIVE
ಮನೆ#Exclusive NewsTop Newsಚಿತ್ತಾಪುರದಲ್ಲಿ ಶಾಂತಿಯುತವಾಗಿ ನಡೆದ ಆರ್​ಎಸ್​​​ಎಸ್​ ಪಥಸಂಚಲನ

ಚಿತ್ತಾಪುರದಲ್ಲಿ ಶಾಂತಿಯುತವಾಗಿ ನಡೆದ ಆರ್​ಎಸ್​​​ಎಸ್​ ಪಥಸಂಚಲನ

ಕಲಬುರಗಿ: ಒಂದು ತಿಂಗಳಿನಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನ ಇಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪೊಲೀಸ್​ ಭದ್ರತೆಯಲ್ಲಿ ಯಶಸ್ವಿಯಾಗಿ ನಡೆದಿದೆ.. ಸಚಿವ ಪ್ರಿಯಾಂಕ್​ ಖರ್ಗೆ ತವರು ಕ್ಷೇತ್ರದಲ್ಲಿ ಧ್ವಜ ಹಾರಿಸಿ ಆರ್​ ಎಸ್​ ಎಸ್​ ಕಾರ್ಯಕರ್ತರು ಹೆಜ್ಜೆ ಹಾಕಿದ್ದಾರೆ..

ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ,ಎಚ್‌ಡಿಎಫ್‌ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್‌ ಮೂಲಕ ಸಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಹೈಕೋರ್ಟ್‌ ಆದೇಶದಂತೆ 300 ಜನ ಗಣವೇಶಧಾರಿಗಳು ಹಾಗೂ 50 ಜನ ಬ್ಯಾಂಡ್ ವಾದಕರಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿತ್ತು. ಜಿಲ್ಲಾಡಳಿತ ನೀಡಿದ್ದ ಷರತ್ತುಬದ್ಧ ಅನುಮತಿಯಂತೆ 300 ಗಣವೇಷಧಾರಿಗಳು ಹಾಗೂ 50 ಘೋಷ್ ವಾದಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಆರ್‌ಎಸ್‌ಎಸ್‌ 100 ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಡೆದ ಪಥಸಂಚಲನದಲ್ಲಿ ಭಾಗಿಯಾದ ಗಣವೇಷಧಾರಿಗಳಿಗೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಿದರು.ರಸ್ತೆಯ ಎರಡೂ ಬದಿಯಲ್ಲಿ ನಿಂತು ಗಣವೇಷಧಾರಿಗಳ ಮೇಲೆ ಹೂವಿನ ಮಳೆ ಸುರಿಸಿದರು.

ಮಧ್ಯಾಹ್ನ 3:45ಕ್ಕೆ ಆರಂಭವಾದ ಪಥ ಸಂಚಲನ 4:22ಕ್ಕೆ ಮುಕ್ತಾಯವಾಯಿತು. ಸರಿಸುಮಾರು 47 ನಿಮಿಷಗಳ ಕಾಲ ಒಟ್ಟು 1.25 ಕಿ.ಮೀ ಪಥಸಂಚಲನ ನಡೆಯಿತು. ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌, ಕೆಎಸ್‌ಆರ್‌ಪಿ ಡಿಎಆರ್ ತುಕಡಿ ಸೇರಿದಂತೆ 650ಜನ ಪೋಲಿಸರು 250ಜನ ಹೋಮ್ ಗಾರ್ಡ್ ನಿಯೋಜನೆ ಮಾಡಲಾಗಿತ್ತು.

ಪಥಸಂಚಲನ ನಡೆಯುವ ಮಾರ್ಗದಲ್ಲಿ ಪುರಸಭೆಯಿಂದ 12 ಹಾಗೂ ಪೋಲಿಸ್ ಇಲಾಖೆಯಿಂದ 44 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. 5 ಡ್ರೋಣ್ ಕ್ಯಾಮೆರಾ ಮೂಲಕ ಜನರ ಚಲನವಲನದ ಮೇಲು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿತ್ತು. ಪಥ ಸಂಚಲನ ನಡೆಯುವ ಮಾರ್ಗದಲ್ಲಿ ಒಟ್ಟು 200 ಧ್ವಜ ಹಾಗೂ ಬಂಟಿಂಗ್, ಪ್ಲೆಕ್ಸ್, ಕಟ್ಟಲು ಪುರಸಭೆ ಅನುಮತಿ ನೀಡಿತ್ತು.

ಪಥ ಸಂಚಲನಕ್ಕೆ ನಿಗದಿತ ಪಟ್ಟಿದ್ದವರನ್ನು ಬಿಟ್ಟು ಗಣವೇಷ ಧರಿಸಿ ಬಂದಿದ್ದ ಇತರರನ್ನು ಪಥಸಂಚಲನದಲ್ಲಿ ಪಾಲ್ಗೊಳ್ಳದಂತೆ ಪೊಲೀಸರು ತಡೆದರು. ಮಾತ್ರವಲ್ಲ ಘೋಷಣೆ ಮೊಳಗಿಸುತ್ತಿದ್ದ ಯುವಕರನ್ನು ಪೊಲೀಸರು ತಡೆದು ಪಥಸಂಚಲನದ ಹಿಂದೆ ಬರುವಂತೆ ನೋಡಿಕೊಂಡರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments