
ಕಲಬುರಗಿ: ರಾಜ್ಯದಲ್ಲಿ ಜಿದ್ದಾ ಜಿದ್ದಿಗೆ ಕಾರಣವಾಗಿದ್ದ RSS ಪಥಸಂಚಲನ ಇಂದು ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಕಲಬುರಗಿಯ ಚಿತ್ತಾಪುರದಲ್ಲಿ ನಡೆಯಲಿದೆ.. ಪಥಸಂಚಲನಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪಥಸಂಚಲನ ನಡೆಯಲಿದೆ..
ಚಿತ್ತಾಪುರದಲ್ಲಿ ಇಂದು ಮಧ್ಯಾಹ್ನ ಪಥಸಂಚಲನ ನಡೆಯಲಿದ್ದು, ಪಥಸಂಚಲನದಲ್ಲಿ ಕೇವಲ ಚಿತ್ತಾಪುರ ಕಂದಾಯ ವ್ಯಾಪ್ತಿಯ ಸ್ವಯಂಸೇವಕರು ಮಾತ್ರ ಭಾಗಿಯಾಗಬೇಕು. 300 ಜನ ಗಣವೇಶಧಾರಿ ಸ್ವಯಂ ಸೇವಕರು ಹಾಗೂ 50 ಜನ ಬ್ಯಾಂಡ್ ಬಾರಿಸುವರು ಸೇರಿ ಒಟ್ಟು 350 ಜನ ಮಾತ್ರ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.
ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗುವ ಪಥಸಂಚಲನವು ಬಸ್ ನಿಲ್ದಾಣ ವೃತ್ತದ ಮೂಲಕ ಡಾ | ಅಂಬೇಡ್ಕರ್ ವೃತ್ತ, ಕೆನರಾ ಬ್ಯಾಂಕ್ ಬ್ಯಾಂಕ್ ಹಾಗೂ ತಾಪಂ ಮಾರ್ಗದ ರಸ್ತೆಯಲ್ಲಿ ಸಾಗಲಿದೆ. ಬಳಿಕ ಬಜಾಜ್ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಪಥಸಂಚಲನದ ವೇಳೆ ಹದ್ದಿನ ಕಣ್ಣಿಡಲು ಚಿತ್ತಾಪುರದ ಪ್ರಮುಖ ಬೀದಿಗಳಲ್ಲಿ 52 ಸಿಸಿಟಿವಿಗಳನ್ನುಅಳವಡಿಸಲಾಗಿದೆ. ಈ ನಡುವೆ ಎಸ್ಪಿ, ಆರು ಡಿವೈಎಸ್ಪಿಗಳು, 18 ಸಿಪಿಐ, 51 ಪಿಎಸ್ ಐ, 110 ಎಎಸ್‌ಐ ಹಾಗೂ 501 ಕಾನ್ಸ್ ಟೇಬಲ್ ಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದ್ದು, ಶನಿವಾರ ರೂಟ್ ಮಾರ್ಚ್ ಕೂಡ ನಡೆದಿದೆ.
ಇನ್ನು ಆರೆಸ್ಸೆಸ್ ಮುಖಂಡರು ಶನಿವಾರ ತಡರಾತ್ರಿ ಬಳಿಕ ಬ್ಯಾನರ್-ಬಂಟಿಂಗ್ಸ್ ಕಟ್ಟಲು ಮುಂದಾಗಿದ್ದಾರೆ. ಈ ಮಧ್ಯೆ ಭಾನುವಾರವೇ ಆರೆಸ್ಸೆಸ್ ಗೆ ನಿಗದಿ ಮಾಡಿದ ವೇಳೆಯಲ್ಲೇ ಪರ್ಯಾಯ ಪಥಸಂಚಲನ ನಡೆಸುವುದಾಗಿ ಘೋಷಿಸಿದ್ದ ‘ಭೀಮ್ ಆರ್ಮಿ’ ಈಗ ಬೇರೊಂದು ದಿನ ಪಥಸಂಚಲನ ನಡೆಸಲು ಮುಂದಾಗಿದೆ. ಆರೆಸ್ಸೆಸ್ ಶತಾಬಿ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 19ರಂದೇ ನಡೆಯಬೇಕಿದ್ದ ಈ ಪಥಸಂಚಲನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಆರೆಸ್ಸೆಸ್ ವಿರುದ್ಧ ಸರ್ಕಾರಕ್ಕೆ ಬರೆದ ಪತ್ರ, ವಿವಿಧ ದಲಿತಪರ ಸಂಘಟನೆಗಳ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಗಿತ್ತು. ಹೈಕೋರ್ಟ್ ಮೊರೆ ಹೋದ ಬಳಿಕವೂ ಎರಡು ಬಾರಿ ಆರೆಸ್ಸೆಸ್ ನಿಗದಿಪಡಿಸಿದ್ದ ದಿನಗಳಂದು ಪಥಸಂಚಲನ ನಡೆಸಲು ಸಾಧ್ಯವಾಗಿರಲ್ಲಿಲ್ಲ. ಕೊನೆಗೆ ಹೈಕೋರ್ಟ್ ಸಂಧಾನ ಸಭೆ ನಡೆಸಲು ಸರ್ಕಾರಕ್ಕೆ ಸೂಚಿಸಿ ಜಿಲ್ಲಾಡಳಿತದ ಮೂಲಕವೇ ಈ ಪಥಸಂಚಲನಕ್ಕೆ ದಿನಾಂಕ ಹಾಗೂ ಸಮಯ ಗೊತ್ತುಪಡಿಸಿದೆ.
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನ ವಿರುದ್ಧ ತೊಡೆ ತಟ್ಟಿದ್ದ ಭೀಮ್ ಆರ್ಮಿ ಸದ್ಯಕ್ಕೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸಿ ಭಾನುವಾರದಂದೇ ನಡೆಸಲು ಉದ್ದೇಶಿಸಿದ್ದ ಭೀಮಪಥ ಸಂಚಲನವನ್ನು ನ.26ರಂದು ನಡೆಸಲು ಮುಂದಾಗಿದೆ. ಭೀಮ್ ಆರ್ಮಿಯ ಉದ್ದೇಶ ಕೈಬಿಡುವ ಪ್ರಶ್ನೆಯೇ ಇಲ್ಲ. ನ. 26ರಂದು ಖಂಡಿತವಾಗಿ ಭೀಮ ಪಥ ಸಂಚಲನ ನಡೆಸಲಾಗುವುದು. ಅದಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಎಲ್ಲ ನಿಯಮಗಳನ್ನು ಪಾಲಿಸುತ್ತೇವೆ. ತಾಂತ್ರಿಕ ನಿರೀಕ್ಷೆಗಳನ್ನೂ ಪೂರೈಸುತ್ತೇವೆ. ನಮ್ಮದು ನೋಂದಾಯಿತ ಸಂಘವಾಗಿದೆ ಎಂದು ಯುವ ಘಟಕದ ರಾಜ್ಯಾಧ್ಯಕ್ಷ ಸಂತೋಷ ಪಾಳಾ ಹೇಳಿದ್ದಾರೆ.
ಏನಿದು ವಿವಾದ..?
ಆರ್ ಎಸ್ ಎಸ್ ಪಥಸಂಚಲನವು ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಕ್ಟೋಬರ್ 16 ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ಕಾನೂನು ಸುವ್ಯವಸ್ಥೆಯ ಆತಂಕದಿಂದ ಕಲಬುರಗಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಆರೆಸ್ಸೆಸ್ ಪರೇಡ್‌ಗೆ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಸಂಘ ಪರಿವಾರ ಕೋರ್ಟ್ ಮೆಟ್ಟಿಲೆರಿತ್ತು. ಆರ್‌ಎಸ್‌ಎಸ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಭೀಮ್ ಆರ್ಮಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಂಘಟನೆಗಳು ತಾವೂ ಕೂಡ ಪಥಸಂಚಲನ ಮಾಡ್ತೇವೆ. ನಮಗೂ ಅವಕಾಶ ನೀಡಿ ಅಂತ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು. ಇದ್ರಿಂದ ದೊಡ್ಡ ಮಟ್ಟದ ಜಿದ್ದಾಜಿದ್ದಿಯೇ ನಡೆದಿತ್ತು.
ಆರ್‌ಎಸ್‌ಎಸ್ ಲಾಠಿ ಬಿಟ್ಟು ಪಥಸಂಚಲನ ಮಾಡಲಿ ಅಂತ ದಲಿತ ಸಂಘಟನೆಗಳು ಪಟ್ಟು ಹಿಡಿದಿದ್ದರಿಂದ ಈ ಪಥಸಂಚಲನ ಫೈಟ್ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹಸ್ತಕ್ಷೇಪ ಕಾರಣ ಎಂದು ಆರ್‌ಎಸ್‌ಎಸ್ ಆರೋಪಿಸಿ, ಕರ್ನಾಟಕ ಹೈಕೋರ್ಟ್‌ಗೆ ಮೊರೆ ಹೋಗಿತ್ತು. ನವೆಂಬರ್ 13 ರಂದು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದು, ನ್ಯಾಯಾಲಯವು ಪಥಸಂಚಲನಕ್ಕೆ ಅನುಮತಿ ನೀಡಿತು. ಜಿಲ್ಲಾಡಳಿತವು ನ್ಯಾಯಾಲಯದ ಆದೇಶದಂತೆ ಸೀಮಿತ ಸಮಯ ಮತ್ತು ಮಾರ್ಗದೊಂದಿಗೆ ಅನುಮತಿ ನೀಡಿದೆ.




