ಕೋಲಾರ ಕಾಂಗ್ರೆಸ್​ನಲ್ಲಿ (Rift in Kolar Congress)ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಮುಳಬಾಗಿಲಿನ ಕುರುಡುಮಲೆ(Kurudumale Vinayaka)ಯಲ್ಲಿ ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆಗೆ ಶನಿವಾರ ಚಾಲನೆ ನೀಡಿತ್ತು.

ಆದರೆ, ಸಚಿವ ಮುನಿಯಪ್ಪ (Muniyappa)ಗೈರು ಹಾಜರಿ ಎದ್ದು ಕಂಡಿತ್ತು. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಮುಖ್ಯಮಂತ್ರಿಗಳು (Chief Minister)ಮಾತ್ರ, ಸಚಿವ ಮುನಿಯಪ್ಪ ಬೆಂಗಳೂರು ಗ್ರಾಮಾಂತರದ ಉಸ್ತುವಾರಿ ನೀಡಲಾಗಿದೆ. ಅವರು ಅಲ್ಲಿ ಬ್ಯುಸಿ ಇರುವ ಕಾರಣ ಇಲ್ಲಿಗೆ ಬಂದಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ಸತ್ಯ ಬೇರೆನೇ ಇದೆ ಎಂಬುದನ್ನು ಖುದ್ದು ಸಚಿವ ಮುನಿಯಪ್ಪ ಬಹಿರಂಗಪಡಿಸಿದ್ದಾರೆ.

ನನ್ನನ್ನು ಆಹ್ವಾನಿಸಿಯೇ ಇರಲಿಲ್ಲ..: ಕುರುಡುಮಲೆ ಗಣಪತಿ ಸನ್ನಿಧಿಯಿಂದ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಕಾರ್ಯಕ್ರಮಕ್ಕೆ ನನ್ನನ್ನು ಸಿಎಂ-ಡಿಸಿಎಂ ಆದಿಯಾಗಿ ಯಾರು ಕೂಡ ಕರೆದಿರಲಿಲ್ಲ.. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇನೆ.. ನನ್ನನ್ನು ನಡೆಸಿಕೊಳ್ತಿರುವ ರೀತಿಯಿಂದ ನೋವಾಗ್ತಿದೆ… ನನ್ನನ್ನು ಏಕೆ ಕರೆದಿಲ್ಲ ಎಂದು ಅವರನ್ನೇ ಕೇಳಿ ಅಂತಾ ಸಚಿವ ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ನಾನು ಕೋಲಾರದಲ್ಲೇ ಇದ್ದೆ..: ಕುರುಡುಮಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ನಡೆಯುತ್ತಿದ್ದಾಗ ನಾನು ಬೆಂಗಳೂರು ಗ್ರಾಮಾಂತರದಲ್ಲಿ ಇರಲಿಲ್ಲ.. ನಾನು ಕೋಲಾರದಲ್ಲಿಯೇ ಇದ್ದೆ.. ಆದರೆ, ಆಹ್ವಾನವಿಲ್ಲದ ಕಾರ್ಯಕ್ರಮಕ್ಕೆ ನಾನು ಹೇಗೆ ಹೋಗಲಿ.. ಇಂದು ಕೂಡ ಕೋಲಾರಕ್ಕೆ ತೆರಳುತ್ತಿದ್ದೇನೆ ಎಂದು ಮುನಿಯಪ್ಪ ಹೇಳಿದ್ದಾರೆ. ಅಲ್ಲದೇ, ನನಗೆ ಹೈಕಮಾಂಡ್​ ನಾಯಕರು ಚಿಕ್ಕಬಳ್ಳಾಪುರ ಉಸ್ತುವಾರಿ ನೀಡಿದ್ದಾರೆ. ನಾನು ಅಲ್ಲಿ ಕೆಲಸ ಮಾಡುತ್ತೇನೆ.. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ ಎಂದು ಮನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳು ನಿನ್ನೆ ನೀಡಿದ ಹೇಳಿಕೆ ಸುಳ್ಳು ಎಂದು ಸಚಿವ ಮುನಿಯಪ್ಪ ಹೇಳದೆಯೇ ಹೇಳಿದ್ದಾರೆ.

ಕೋಲಾರದಲ್ಲಿ ಅವರೇ ಗೆಲ್ಲಿಸಿಕೊಂಡು ಬರಲಿ..: ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಶ್ರಮಿಸಿದವರ ಜೊತೆ ಸೇರಿಕೊಂಡು ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಇಂದು ಕಾಂಗ್ರೆಸ್ ಗೆಲ್ಲಿಸಲು ಹೊರಟಿದ್ದಾರೆ.. ಅವರೇ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಂಡು ಬರಲಿ ಬಿಡಿ ಎಂದು ಸಚಿವ ಮುನಿಯಪ್ಪ ಸವಾಲ್ ಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್​ ಅಭ್ಯರ್ಥಿ ಕೆವಿ ಗೌತಮ್ ಪರವಾಗಿ ಕೆಲಸ ಮಾಡಲ್ಲ ಎಂದು ಸಚಿವ ಮುನಿಯಪ್ಪ ಪರೋಕ್ಷವಾಗಿ ಹೇಳಿದ್ದಾರೆ.

ಕೋಲಾರ ಕಾಂಗ್ರೆಸ್​ ಪಕ್ಷದಲ್ಲಿನ ಭಿನ್ನಮತ ಹೀಗೆಯೇ ಮುಂದುವರೆದಲ್ಲಿ ಕೆವಿ ಗೌತಮ್ ಗೆಲುವು ಕಷ್ಟವಾಗಲಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ.

 

By admin

Leave a Reply

Your email address will not be published. Required fields are marked *

Verified by MonsterInsights