ಮೈಸೂರು: ಖಾಸಗಿ ಹೋಟೆಲ್ವೊಂದರಲ್ಲಿ ಆರ್ಎಫ್ಒ ಅಧಿಕಾರಿ ಶವವಾಗಿ ಪತ್ತೆ ಆಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ..
ಮೃತನನ್ನು ಟಿ ನರಸೀಪುರ ಆರ್ಎಫ್ಒ ಕಾಂತರಾಜ್ ಚೌಹಾಣ್ ಎಂದು ತಿಳಿದುಬಂದಿದೆ. ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಘಟನಾ ಸ್ಥಳಕ್ಕೆ ಲಷ್ಕರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕೇವಲ 15 ದಿನಗಳ ಹಿಂದೆಯಷ್ಟೇ ಟಿ. ನರಸೀಪುರಕ್ಕೆ ವರ್ಗಾವಣೆಯಾಗಿ ಬಂದಿದ್ದ ಕಾಂತರಾಜ್ ಚೌಹಾಣ್, ಮೈಸೂರು ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್‌ನಲ್ಲಿ ತಂಗಿದ್ದರು. ನಿನ್ನೆ ಮಧ್ಯಾಹ್ನ ಕೊಪ್ಪಳ ಮೂಲದ ಮಲ್ಲನಗೌಡ ಪಾಟೀಲ್ ಎಂಬ ಸ್ನೇಹಿತನ ಜೊತೆಗೆ ರೂಮ್ ಬುಕ್ ಮಾಡಲಾಗಿತ್ತು. ಆದರೆ, ಇಂದು ಮುಂಜಾನೆ ಹೋಟೆಲ್ ಸಮೀಪದ ಜ್ಯುವೆಲ್ಲರಿ ಹಿಂಭಾಗದ ಕಾರಿಡಾರ್‌ನಲ್ಲಿ ಕಾಂತರಾಜ್ ಅವರ ಮೃತದೇಹ ಪತ್ತೆಯಾಗಿದೆ.
ಘಟನೆ ನಡೆದ ಬಳಿಕ ಕಾಂತರಾಜ್ ಜೊತೆಗಿದ್ದ ಸ್ನೇಹಿತ ಮಲ್ಲನಗೌಡ ಪಾಟೀಲ್ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಲಷ್ಕರ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಲ್ಲನಗೌಡ ಅವರ ಪತ್ತೆಗೆ ಜಾಲ ಬೀಸಿದ್ದಾರೆ. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬುದು ತನಿಖೆಯ ಬಳಿಕ ತಿಳಿಯಬೇಕಿದೆ.


