Top Newsದೇಶ/ವಿದೇಶವಿಶೇಷಸುದ್ದಿ

ಅಮೆರಿಕದಲ್ಲಿ ರಿಲಯನ್ಸ್‌ನಿಂದ ಬೃಹತ್ ಹೂಡಿಕೆ ; ಟ್ರಂಪ್‌ ಘೋಷಣೆ

ವಾಷಿಂಗ್ಟನ್: ಭಾರತದ ಪ್ರಮುಖ ಖಾಸಗಿ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಅಮೆರಿಕದ ಟೆಕ್ಸಾಸ್‌ನಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ತೈಲ ಸಂಸ್ಕರಣಾ ಘಟಕದಲ್ಲಿ ಬೃಹತ್ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಸುಮಾರು 300 ಬಿಲಿಯನ್ ಡಾಲರ್ (ಅಂದಾಜು 27.56 ಲಕ್ಷ ಕೋಟಿ ರೂ.) ವೆಚ್ಚದ ಈ ಯೋಜನೆಯು ಅಮೆರಿಕದ ಇತಿಹಾಸದಲ್ಲೇ ಅತೀ ದೊಡ್ಡ ಇಂಧನ ಒಪ್ಪಂದ ಎಂದು ಬಣ್ಣಿಸಲಾಗಿದೆ.

ತಮ್ಮ ಸಾಮಾಜಿಕ ಮಾಧ್ಯಮ ‘ಟ್ರೂತ್ ಸೋಶಿಯಲ್’ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆ ಬಂದರಿನಲ್ಲಿ ಈ ಘಟಕ ಸ್ಥಾಪನೆಯಾಗಲಿದೆ ಎಂದು ತಿಳಿಸಿದ್ದಾರೆ. ಕಳೆದ 50 ವರ್ಷಗಳ ಅವಧಿಯಲ್ಲಿ ಅಮೆರಿಕದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಹೊಸ ತೈಲ ಸಂಸ್ಕರಣಾ ಘಟಕ ಇದಾಗಿದೆ.

ಈ ಯೋಜನೆಯಿಂದ ದಕ್ಷಿಣ ಟೆಕ್ಸಾಸ್ ಭಾಗದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸ ಘಟಕವು ಅಮೆರಿಕದ ದೇಶೀಯ ಮಾರುಕಟ್ಟೆಗೆ ಇಂಧನ ಪೂರೈಸುವುದಲ್ಲದೆ, ಜಾಗತಿಕ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಿ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲಿದೆ.


ಇದು ವಿಶ್ವದ ಅತ್ಯಂತ ಸ್ವಚ್ಛವಾದ (Cleanest) ಸಂಸ್ಕರಣಾಗಾರವಾಗಲಿದೆ ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

ಈ ಬೃಹತ್ ಹೂಡಿಕೆಗಾಗಿ ಟ್ರಂಪ್ ಭಾರತ ಸರ್ಕಾರ ಮತ್ತು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ತೆರಿಗೆ ಕಡಿತ ಮತ್ತು ಸುಲಭ ಪರವಾನಗಿ ನೀತಿಗಳಿಂದಾಗಿ ಇಂತಹ ದೈತ್ಯ ಹೂಡಿಕೆಗಳು ಅಮೆರಿಕಕ್ಕೆ ಮರಳಿ ಬರುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ.

ಈ ಸುದ್ದಿಯ ಬೆನ್ನಲ್ಲೇ ಭಾರತೀಯ ಶೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಸಂಸ್ಥೆಯ ಶೇರುಗಳು ಚೇತರಿಕೆ ಕಂಡಿವೆ.

Comments (0)

Your email address will not be published. Required fields are marked *

Back to top button