Wednesday, February 11, 2026
26.6 C
Bengaluru
Google search engine
LIVE
ಮನೆSportsಕ್ರೀಡಾಂಗಣ ಬದಲಾಯಿಸಲು ಹೋದ ಆರ್‌ಸಿಬಿಗೆ ಮೈದಾನ ಸಿಗದೆ ಪರದಾಟ!

ಕ್ರೀಡಾಂಗಣ ಬದಲಾಯಿಸಲು ಹೋದ ಆರ್‌ಸಿಬಿಗೆ ಮೈದಾನ ಸಿಗದೆ ಪರದಾಟ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ಕಹಿ ನೆನಪಿನ ನಡುವೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತನ್ನ ತವರು ಮೈದಾನವನ್ನು ಬದಲಾಯಿಸುವ ಪ್ರಯತ್ನದಲ್ಲಿ ದೊಡ್ಡ ಹಿನ್ನಡೆಯಾಗಿದೆ.

2025ರ ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಕರಾಳ ಘಟನೆಯ ಹಿನ್ನೆಲೆಯಲ್ಲಿ, 2026ರ ಐಪಿಎಲ್ ಆವೃತ್ತಿಯ 5 ತವರು ಪಂದ್ಯಗಳನ್ನು ಬೆಂಗಳೂರಿನಿಂದ ಹೊರಗೆ ನಡೆಸಲು ಆರ್‌ಸಿಬಿ ಫ್ರಾಂಚೈಸಿ ಗಂಭೀರವಾಗಿ ಯೋಚಿಸಿತ್ತು. ಆದರೆ, ಈ ಯೋಜನೆಗೆ ಈಗ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಡ್ಡಿಯಾಗಿದೆ.

ನವೀ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವನ್ನು ಬಳಸಿಕೊಳ್ಳಲು ಆರ್‌ಸಿಬಿ ಎನ್‌ಒಸಿ ಕೋರಿತ್ತು. ಆದರೆ, ಈ ಮೈದಾನವನ್ನು ಮುಂಬೈ ಇಂಡಿಯನ್ಸ್ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎಂಸಿಎ ಅನುಮತಿ ನಿರಾಕರಿಸಿದೆ. ಅತ್ತ ಪುಣೆ ಮೈದಾನವನ್ನು ರಾಜಸ್ಥಾನ ರಾಯಲ್ಸ್ ಈಗಾಗಲೇ ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಆರ್‌ಸಿಬಿಗೆ ಅಲ್ಲಿಯೂ ಅವಕಾಶ ಸಿಕ್ಕಿಲ್ಲ.ಒಂದು ಕಡೆ ಬೇರೆ ರಾಜ್ಯಗಳಲ್ಲಿ ಮೈದಾನ ಸಿಗದಿದ್ದರೆ, ಇನ್ನೊಂದೆಡೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಂದ್ಯಗಳನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಫೆಬ್ರವರಿ 12 ರಂದು ಈ ಕುರಿತು ಮಹತ್ವದ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಗೃಹ ಸಚಿವರು ನೇಮಿಸಿದ್ದ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.

ಭದ್ರತಾ ವ್ಯವಸ್ಥೆ ಮತ್ತು ಪ್ರೇಕ್ಷಕರ ನಿಯಂತ್ರಣದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆಯೊಂದಿಗೆ, 2026ರ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ನಡೆಸಲು ಕಸರತ್ತು ನಡೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅಭಿಮಾನಿಗಳು ಮತ್ತೆ ಚಿನ್ನಸ್ವಾಮಿ ಅಂಗಳದಲ್ಲೇ ತಮ್ಮ ನೆಚ್ಚಿನ ತಂಡವನ್ನು ಕಣ್ತುಂಬಿಕೊಳ್ಳಬಹುದು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments