ಕ್ರೇಜಿ ಬ್ರಹ್ಮ’ ವೇದಿಕೆಯಲ್ಲಿ ರವಿಚಂದ್ರನ್-ಹಂಸಲೇಖ ಜುಗಲ್ಬಂದಿ!

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿದ ‘ಕ್ರೇಜಿಸ್ಟಾರ್’ ರವಿಚಂದ್ರನ್ ಮತ್ತು ‘ನಾದಬ್ರಹ್ಮ’ ಹಂಸಲೇಖ ಅವರ ಅಪರೂಪದ ಜೋಡಿಯ 40 ವರ್ಷಗಳ ಸುದೀರ್ಘ ಕಲಾ ಪ್ರಯಾಣವನ್ನು ಸಂಭ್ರಮಿಸಲು ‘ಕ್ರೇಜಿ ಬ್ರಹ್ಮ’ ಎಂಬ ಬೃಹತ್ ಕಾರ್ಯಕ್ರಮ ಸಿದ್ಧವಾಗಿದೆ. 80 ಮತ್ತು 90ರ ದಶಕದಲ್ಲಿ ಈ ಜೋಡಿಯು ನೀಡಿದ ಸೂಪರ್ ಹಿಟ್ ಸಿನಿಮಾಗಳು ಮತ್ತು ಮಧುರ ಗೀತೆಗಳು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಸುಮಾರು ಎರಡು ದಶಕಗಳ ಕಾಲ ಈ ಜೋಡಿಯು ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳದಿದ್ದರೂ, ಅವರ ನಡುವಿನ ಸ್ನೇಹ ಮತ್ತು ಅವರು ಸೃಷ್ಟಿಸಿದ ಸಂಗೀತದ ಮಾಂತ್ರಿಕತೆ ಮಾತ್ರ ಕಡಿಮೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ್ ಇನ್ನೋವೇಟಿವ್ ಸಂಸ್ಥೆಯು ಮೇ 30ರಂದು ಕೆಂಗೇರಿಯ ಜೆಕೆ ಗ್ರಾಂಡ್ ಅರೇನಾದಲ್ಲಿ ಸಂಜೆ 6ರಿಂದ ಮಧ್ಯರಾತ್ರಿಯವರೆಗೆ ಈ ಅದ್ಧೂರಿ ಸಮಾರಂಭವನ್ನು ಆಯೋಜಿಸಿದೆ.

‘Where Music Meets Magic’ ಎಂಬ ಅಡಿಬರಹದಡಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರವಿಚಂದ್ರನ್ ಮತ್ತು ಹಂಸಲೇಖ ಜೋಡಿಯ ಜನಪ್ರಿಯ ಹಾಡುಗಳನ್ನು ಪುನರ್ ಸೃಷ್ಟಿಸಲಾಗುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದಕ್ಷಿಣ ಭಾರತದ ಖ್ಯಾತ ನಟ ಚಿರಂಜೀವಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ರವಿಚಂದ್ರನ್ ಅವರೊಂದಿಗೆ ನಟಿಸಿದ ಹಲವಾರು ನಾಯಕಿಯರು ಮತ್ತು ದೇಶದ ಹೆಸರಾಂತ ಗಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಜಕ ವಿನಯ್ ಅವರು, ಕಳೆದ 15 ವರ್ಷಗಳಿಂದ ಯಾವುದೇ ಸಮಾರಂಭವಿರಲಿ ಈ ಜೋಡಿಯ ಹಾಡುಗಳಿಲ್ಲದೆ ಪೂರ್ಣವಾಗುವುದಿಲ್ಲ ಎಂಬ ಅಂಶವೇ ಇಂತಹದೊಂದು ಕಾರ್ಯಕ್ರಮ ರೂಪಿಸಲು ಪ್ರೇರಣೆಯಾಯಿತು ಎಂದು ತಿಳಿಸಿದರು.
ತಮ್ಮ ನಡುವಿನ ಹಳೆಯ ಬಿರುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ ರವಿಚಂದ್ರನ್ ಅವರು, ಯಾವುದೇ ಸಂಬಂಧದಲ್ಲಿ ಯಶಸ್ಸು ಮತ್ತು ಇಗೋ ಬಂದಾಗ ಬಿರುಕು ಮೂಡುವುದು ಸಹಜ ಎಂದು ಅಭಿಪ್ರಾಯಪಟ್ಟರು. “ನನ್ನನ್ನು ಕ್ರೇಜಿ ಸ್ಟಾರ್ ಮಾಡಿದ್ದೇ ಹಂಸಲೇಖ ಅವರು ಬರೆದುಕೊಟ್ಟ ಸಾಲುಗಳು. ನಾವು ಸಿನಿಮಾ ಮಾಡದಿರಬಹುದು ಆದರೆ ನಮ್ಮ ಸ್ನೇಹ ಯಾವತ್ತೂ ಕೆಟ್ಟಿಲ್ಲ, ನಾವು ಕಿತ್ತಾಡಿಲ್ಲ” ಎಂದು ಸ್ಪಷ್ಟಪಡಿಸಿದರು. ಹಂಸಲೇಖ ಅವರ ಜೊತೆಗಿದ್ದಾಗ ಮಾತ್ರ ತಾವು ಹೆಚ್ಚು ನಗುವುದಾಗಿ ತಿಳಿಸಿದ ರವಿಮಾಮ, ಈ ಕಾರ್ಯಕ್ರಮವು ಕೇವಲ ವೇದಿಕೆಯ ಸಂಭ್ರಮವಲ್ಲ, ಬದಲಾಗಿ ಅಭಿಮಾನಿಗಳಿಗಾಗಿ ಹಳೆಯ ನೆನಪುಗಳನ್ನು ಮರುಕಳಿಸುವ ಪ್ರಯತ್ನ ಎಂದರು.

ನಾದಬ್ರಹ್ಮ ಹಂಸಲೇಖ ಅವರು ಕೂಡ ಈ ಕಾರ್ಯಕ್ರಮದ ಬಗ್ಗೆ ಅತೀವ ಆಸಕ್ತಿ ವ್ಯಕ್ತಪಡಿಸಿದ್ದು, ಇದು ಕನ್ನಡಿಗರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಕ್ಷಣ ಎಂದು ಬಣ್ಣಿಸಿದರು. “ನಾವಿಬ್ಬರೂ ಜೊತೆಯಾಗಿರಲು ಕೇವಲ ಸಿನಿಮಾಗಳೇ ಬೇಕಿಲ್ಲ, ಇಂತಹ ವೇದಿಕೆಗಳ ಮೂಲಕವೂ ನಾವು ಮಾಡಿದ ಕೆಲಸಗಳನ್ನು ನೆನಪಿಸಿಕೊಳ್ಳಬಹುದು” ಎಂದು ಅವರು ಹೇಳಿದರು. ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿರುವ ಈ ‘ಕ್ರೇಜಿ ಬ್ರಹ್ಮ’ ಕಾರ್ಯಕ್ರಮವು ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದಾದ್ಯಂತ ಮುಂದಿನ ದಿನಗಳಲ್ಲಿ ವಿಸ್ತರಿಸುವ ಆಶಯವನ್ನು ಹಂಸಲೇಖ ವ್ಯಕ್ತಪಡಿಸಿದರು.




