ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳಷ್ಟೆ ಬಾಕಿ ಉಳಿದಿವೆ. ಹಲವು ರಾಜ್ಯಗಳಲ್ಲಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಿನ್ನೆ ಓಪನ್ ಆಗಿದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಅಮೆರಿಕ ಇನ್ನಿತರೆ ಕಡೆಗಳಲ್ಲಿ ನಿನ್ನೆಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ. ಕೇವಲ ಒಂದೇ ದಿನದಲ್ಲಿ ದಾಖಲೆ ಮೊತ್ತದ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆ. ಟಿಕೆಟ್ ಬುಕಿಂಗ್ ವೇಗ ನೋಡಿದರೆ ‘ಪುಷ್ಪ 2’ ಸಿನಿಮಾ ‘ಬಾಹುಬಲಿ 2’ ದಾಖಲೆ ಮುರಿಯಲಿದೆಯಾ ಎಂಬ ಅನುಮಾನ ಮೂಡುತ್ತಿದೆ. ಮುಂಬೈ ಹಾಗೂ ದೆಹಲಿಯ ಕೆಲವು ಥಿಯೇಟರ್ಗಳಲ್ಲಿ ಪುಷ್ಪಾ 2 ಸಿನಿಮಾದ ಒಂದು ಟಿಕೆಟ್ ಬೆಲೆ 2 ಸಾವಿರ ರೂಪಾಯಿ ದಾಟಿ ಹೋಗಿದೆ.
ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪುಷ್ಪಾ 2 ದಿ ರೂಲ್ ಸಿನಿಮಾ ಕೂಡ ಒಂದು. ಮೊದಲ ಭಾಗ ಪುಷ್ಪಾ ಸಿನಿಮಾ ಸೂಪರ್ ಹಿಟ್ ಆದ ನಂತರ, ಸಿನಿ ಪ್ರಿಯರು ಎರಡನೇ ಭಾಗದ ಸಿನಿಮಾಗಾಗಿ ಕಾಯುತ್ತಿದ್ದರು. ಸದ್ಯ ಡಿಸೆಂಬರ್ 5 ರಂದು ಸಿನಿಮಾ ರಿಲೀಸ್ ಆಗಲಿದೆ. ದೆಹಲಿಯ ಪಿವಿಆರ್ ಗಳಲ್ಲಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿವೆ. ಹಿಂದಿ 2ಡಿ ವರ್ಷನ್ ಟಿಕೆಟ್ಗಳ ಬೆಲೆ 2,400 ರೂಪಾಯಿ ತಲುಪಿದೆ ಎಂದು ಹೇಳಲಾಗುತ್ತಿದೆ. ಮುಂಬೈನ ಮಯಸನ್ ಪಿವಿಆರ್ ಥಿಯೇಟರ್ನಲ್ಲಿ ಒಂದು ಟಿಕೆಟ್ ಬೆಲೆ 2100 ರೂಪಾಯಿಗೆ ತಲುಪಿದೆ. ಆದರೂ ಕೂಡ ಜನರು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದಾರೆ. ಸಾಮಾನ್ಯವಾಗಿ ಹೊಸ ಸಿನಿಮಾ ರಿಲೀಸ್ ಆದಾಗ ಟಿಕೆಟ್ ಬೆಲೆಗಳಲ್ಲಿ ಏರಿಕೆಯಾಗೋದು ಸಾಮಾನ್ಯ, ಆದ್ರೆ ಈ ಹಿಂದೆ ಇಷ್ಟು ಮೊತ್ತ ಕೊಟ್ಟು ಟಿಕೆಟ್ ಖರೀದಿ ಮಾಡಿದ ಉದಾಹರಣೆಗಳು ಕಡಿಮೆ ಎನ್ನುತ್ತಿದ್ದಾರೆ ಪಿವಿಆರ್ ಸಿಬ್ಬಂದಿ.
ಇನ್ನು ಐಮ್ಯಾಕ್ಸ್ ಸ್ಕ್ರೀನ್ನಲ್ಲಿಯೂ ಕೂಡ ಪುಷ್ಪಾ ಸಿನಿಮಾದ ಟಿಕೆಟ್ ದರ ಗಗನಕ್ಕೆ ಏರಿದೆ. ದೆಹಲಿಯ ಸಿಟಿ ವಾಕ್ ಮಾಲ್ನಲ್ಲಿನ ಐಮ್ಯಾಕ್ಸ್ ಥಿಯೇಟರ್ನಲ್ಲಿ ಒಂದು ಟಿಕೆಟ್ಗೆ 1860 ರೂಪಾಯಿ ದರ ನಿಗದಿಯಾಗಿದೆ. ಮುಂಬೈನ ಥಿಯೇಟರ್ನಲ್ಲಿ 1500 ರಿಂದ 1700 ರೂಪಾಯಿಗೆ ತಲುಪಿದೆ.
ಆಂಧ್ರ, ತೆಲಂಗಾಣ, ಕೇರಳ ಇನ್ನೂ ಕೆಲವು ರಾಜ್ಯಗಳಲ್ಲಿ ನಿನ್ನೆ ಬುಕಿಂಗ್ ಓಪನ್ ಆಗಿರಲಿಲ್ಲ. ಹಾಗಿದ್ದರೂ ಸಹ ಭಾರತ ಒಂದರಲ್ಲೇ ನಿನ್ನೆ ಒಂದೇ ದಿನದಲ್ಲಿ ಕೇವಲ ಮಲ್ಟಿಪ್ಲೆಕ್ಸ್ಗಳಲ್ಲಿ 55 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮುಂಗಡವಾಗಿ ಬುಕಿಂಗ್ ಆಗಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಸೇರಿಸಿಕೊಂಡರೆ ಮೊದಲ ದಿನವೇ 2.79 ಲಕ್ಷ ಟಿಕೆಟ್ಗಳು ಮುಂಗಡವಾಗಿ ಬುಕ್ ಆಗಿವೆಯಂತೆ ಅದೂ ಕೇವಲ ಒಂದೇ ಒಂದು ದಿನದಲ್ಲಿ.
ಇಂದು ಕೇರಳದಲ್ಲಿ ಬುಕಿಂಗ್ ಓಪನ್ ಆಗಿದ್ದು, ಓಪನ್ ಆದ ಕೂಡಲೇ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗುತ್ತಿವೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಟಿಕೆಟ್ ಬುಕಿಂಗ್ ಇನ್ನೂ ಓಪನ್ ಆಗಿಲ್ಲ. ಒಂದೊಮ್ಮೆ ಆ ಎರಡು ರಾಜ್ಯಗಳಲ್ಲಿ ಟಿಕೆಟ್ ಬುಕಿಂಗ್ ಓಪನ್ ಆದರೆ ಈ ಸಂಖ್ಯೆ ದುಪ್ಪಟ್ಟಾಗಲಿದೆ. ಕೆಲ ವರದಿಗಳ ಪ್ರಕಾರ ಈ ವರೆಗೆ ಆಗಿರುವ ಕೇವಲ ಒಂದು ದಿನದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ನಿಂದಲೇ ಸುಮಾರು 15 ಕೋಟಿಗೂ ಹೆಚ್ಚು ಹಣ ಗಳಿಕೆ ಆಗಲಿದೆಯಂತೆ. ಮುಂದಿನ ನಾಲ್ಕು ದಿನಗಳಲ್ಲಿ ಅಡ್ವಾನ್ಸ್ ಬುಕಿಂಗ್ ಟಿಕೆಟ್ನಿಂದಲೇ ಸುಮಾರು ನೂರು ಕೋಟಿ ಗಳಿಕೆ ಆದರೆ ಆಶ್ಚರ್ಯ ಪಡುವಂತಿಲ್ಲ.