ಬೆಂಗಳೂರು: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಗೌರವ ಗುಪ್ತಾ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ 230 ಪುಟಗಳ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದೆ. ಅದರಲ್ಲಿ ಏರ್‌ಪೋರ್ಟ್‌ನಲ್ಲಿ ರನ್ಯಾ ರಾವ್ ಅವರಿಗೆ ಸಿಗುತ್ತಿದ್ದ ಪ್ರೋಟೋಕಾಲ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿದೆ.
ದುಬೈಗೆ ಹೋಗಿ ಬರುತ್ತಿದ್ದ ನಟಿ ರನ್ಯಾ ರಾವ್ ಅವರು ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ಬಳಕೆ ಮಾಡುತ್ತಿದ್ದರು. ಈ ವಿಚಾರ ರನ್ಯಾ ರಾವ್ ಅವರ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರಿಗೂ ಗೊತ್ತಿತ್ತು. ಆದರೆ ರಾಮಚಂದ್ರರಾವ್ ಅವರು ಮಗಳಿಗೆ ಪ್ರೋಟೋಕಾಲ್ ನೀಡಲು ಹೇಳಿರಲಿಲ್ಲ. ಅವರೇ ಹೇಳಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ಆದರೆ ರನ್ಯಾ ರಾವ್ ಯಾವ ರೀತಿ ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಅನ್ನೋ ಬಗ್ಗೆ ತನಿಖಾ ಸಮಿತಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದೆ.
ಗೌರವ ಗುಪ್ತ ಅವರ ತನಿಖಾ ವರದಿಯಲ್ಲಿ ನಟಿ ರನ್ಯಾ ರಾವ್ ಅವರು ಹಲವು ಬಾರಿ ಪ್ರೋಟೋಕಾಲ್ ಪಡೆದಿರೋದು ಬೆಳಕಿಗೆ ಬಂದಿದೆ. ಇದಕ್ಕೆ ಅವರು ಹಲವು ಬಾರಿ ಸರ್ಕಾರಿ ಕಾರು, ಪೊಲೀಸ್ ವಾಹನವನ್ನೂ ಬಳಕೆ ಮಾಡಿದ್ದಾರೆ. ಈ ಮಾಹಿತಿ ವಿಮಾನ ನಿಲ್ದಾಣದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ನಟಿ ರನ್ಯಾ ರಾವ್ ಕೇಸ್‌ನಲ್ಲಿ ಪ್ರೋಟೋಕಾಲ್ ದುರ್ಬಳಕೆ ಬಗ್ಗೆ ಸಾಕ್ಷಿ ಲಭ್ಯವಾದ ಮೇಲೆ ಈ ಕೇಸ್‌ನ ತನಿಖೆ ಮತ್ತಷ್ಟು ಚುರುಕಾಗಲಿದೆ. ರನ್ಯಾ ರಾವ್ ಜೊತೆಗೆ ಡಿಜಿಪಿ ರಾಮಚಂದ್ರರಾವ್ ಅವರಿಗೂ ಇನ್ಮುಂದೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.