ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಅಧಿಕಾರಿ ಈಗ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇದು (AI) ಬಳಸಿ ಸೃಷ್ಟಿಸಲಾದ ವಿಡಿಯೋ ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಚಂದ್ರ ರಾವ್, ವಿಡಿಯೋದಲ್ಲಿರುವುದು ನಾನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ AI ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ಸುದೀರ್ಘ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸಿರುವ ವ್ಯವಸ್ಥಿತ ಷಡ್ಯಂತ್ರವಿದು,” ಎಂದು ಕಿಡಿಕಾರಿದ್ದಾರೆ.
“ನಾನು ಎಂಟು ವರ್ಷಗಳ ಹಿಂದೆ ಬೆಳಗಾವಿಯಲ್ಲಿದ್ದೆ. ಅಂದಿನಿಂದಲೂ ನನ್ನನ್ನು ಗುರಿ ಮಾಡಲಾಗುತ್ತಿದೆ. ಇದರ ಬಗ್ಗೆ ನಾನು ಈಗಾಗಲೇ ವಕೀಲರ ಜೊತೆ ಮಾತನಾಡುತ್ತಿದ್ದೇನೆ. ಈ ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆಯಾಗಬೇಕು,” ಎಂದು ಆಗ್ರಹಿಸಿದ್ದಾರೆ.
ಒಂದೆಡೆ ವಿಡಿಯೋದಲ್ಲಿ ಅಧಿಕಾರಿ ಸಮವಸ್ತ್ರದಲ್ಲೇ ಮಹಿಳೆಯೊಂದಿಗೆ ಇರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿ ಇದನ್ನು ತಾಂತ್ರಿಕ ಷಡ್ಯಂತ್ರ ಎನ್ನುತ್ತಿದ್ದಾರೆ. ಮಗಳು ರನ್ಯಾ ರಾವ್ ಅವರ ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಈ ಹೊಸ ವಿವಾದವು ಗೃಹ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಿಡಿಯೋ ವೈರಲ್ ಆಗಿ ಇಲಾಖೆಗೆ ಮುಜುಗರ ಉಂಟಾಗುತ್ತಿದ್ದಂತೆಯೇ, ರಾಮಚಂದ್ರ ರಾವ್ ಅವರು ತಮ್ಮ ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ದೌಡಾಯಿಸಿದ್ದರು. ಆದರೆ, ಗೃಹ ಸಚಿವರು ಈ ಹಂತದಲ್ಲಿ ಅಧಿಕಾರಿಯನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಡಿಜಿಪಿ ಅವರು ನಿರಾಸೆಯಿಂದ ವಾಪಸ್ ಆಗಿದ್ದಾರೆ.


