ಬೆಂಗಳೂರು: ಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಮೇಲೆ ಕಡ್ಡಾಯ ರಜೆಯಲ್ಲಿದ್ದ ಪೊಲೀಸ್ ಮಹಾನಿರ್ದೇಶಕ ಕೆ. ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ಮರುನೇಮಕ ಮಾಡಿದೆ. ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಬಡ್ತಿ ನೀಡಿದೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾನಿರ್ದೇಶಕರ ಹುದ್ದೆ ದಯಪಾಲಿಸಲಾಗಿದೆ.
ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ ಡಿಜಿಪಿ (ಡಿಸಿಆರ್‌ಇ) ಐಪಿಎಸ್ (ವೇತನ) ನಿಯಮಗಳು 2016ರ ನಿಯಮ 12ರ ಅಡಿಯಲ್ಲಿ ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಮಹಾನಿರ್ದೇಶಕ ಹುದ್ದೆಗೆ ಸಮಾನ ಎಂದು ಹೇಳಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ನಟಿ ರನ್ಯಾ ರಾವ್ ಬಂಧನದ ನಂತರ ಕಳೆದ ಮಾರ್ಚ್‌ನಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ನೇತೃತ್ವದ ಸಮಿತಿ ವಿಚಾರಣೆಗೆ ಒಳಪಡಿಸಿತ್ತು. ಹೀಗಾಗಿ ಮಾರ್ಚ್ 15ರಂದು ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಯಿತು.