ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರೋ ಭವ್ಯ ರಾಮಮಂದಿರದಲ್ಲಿ ಶ್ರೀರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆಗೆ ಶುರುವಾಗಿದೆ.ಈ ಅದ್ಧೂರಿ ಕಾರ್ಯಕ್ರಮಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಇತ್ತ ಕರ್ನಾಟಕ ರಾಜ್ಯದಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಇಂದು ವಿಶೇಷ ಪೂಜೆ ನಡೆಯಲಿದೆ. ರಾಜ್ಯಾದ್ಯಂತ ಭಕ್ತರು ನಾನಾ ರೀತಿಯಲ್ಲಿ ತಮ್ಮ ಭಕ್ತಿಯನ್ನು ತೋರ್ಪಡಿಸುತ್ತಿದ್ದಾರೆ. ಬನ್ನಿ ಕರ್ನಾಟಕದಾದ್ಯಂತ ಸಂಭ್ರಮ ಹೇಗಿದೆ?
ಅರುಣ್ ಯೋಗಿರಾಜ್ ಮನೆಯಲ್ಲಿ ಹಬ್ಬ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮೈಸೂರಿನ ರಾಮಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ. ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇನ್ನು ರಾಮಲಲ್ಲಾ ವಿಗ್ರಹದ ಶಿಲೆ ಸಿಕ್ಕಿದ ಮೈಸೂರು ತಾಲ್ಲೂಕು ಹಾರೋಹಳ್ಳಿ ಗ್ರಾಮದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ಶಾಸಕ ಜಿ ಟಿ ದೇವೇಗೌಡ ಜಮೀನು ಮಾಲೀಕ ರಾಮದಾಸ್ ಶಿಲೆ ತೆಗೆದ ಶ್ರೀನಿವಾಸ್ ಭಾಗಿಯಾಗಲಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಪ್ರತಿಷ್ಠಾಪನೆಯಾಗಲಿದೆ ರಾಮನ ಮೂರ್ತಿ
ರಾಮನ ಬಂಟ ಆಂಜನೇಯ ಜನ್ಮಸ್ಥಳವಾಗಿರುವ ಅಂಜನಾದ್ರಿ ಬೆಟ್ಟದಲ್ಲಿ ಇಂದು ರಾಮನ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ 500 ಕೆಜಿ ತೂಕ, 9 ಅಡಿ ಎತ್ತರದ ಪಂಚಲೋಹದ ರಾಮನ ಮೂರ್ತಿಯನ್ನು ಇಂದು ಕೊಪ್ಪಳದ ಅಂಜನಾದ್ರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತೆ.
ಹುಬ್ಬಳ್ಳಿಗೆ ಬಂತು 12 ಅಡಿ ಉದ್ಧದ ರಾಮನ ಮೂರ್ತಿ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಹುಬ್ಬಳ್ಳಿಗೆ ಬಂತು 12 ಅಡಿ ಉದ್ಧದ ರಾಮನ ಮೂರ್ತಿ. ಹುಬ್ಬಳ್ಳಿಯ ಗವಳಿ ಗಲ್ಲಿಯ ರಾಮ ಭಕ್ತರು 12 ಅಡಿ ಉದ್ಧದ ರಾಮನ ಮೂರ್ತಿ ನಿರ್ಮಾಣ ಮಾಡಿ ಸಾರ್ವಜನಿಕರ ದರ್ಶನಕ್ಕೆ ಇಟ್ಟಿದ್ದಾರೆ. ಸುಮಾರು 1 ಲಕ್ಷ 80 ಸಾವಿರ ಖರ್ಚು ಮಾಡಿ ರಾಮನ ಮೂರ್ತಿ ಮಾಡಲಾಗಿದೆ. ಬೆಳಗಾವಿಯ ಕಲಾವಿದರಿಂದ ರಾಮನ ಮೂರ್ತಿ ನಿರ್ಮಾಣವಾಗಿದೆ. ಗವಳಿ ಗಲ್ಲಿಯ ಭಕ್ತರೆಲ್ಲ ಸೇರಿ ಹಣ ಕೂಡಿಸಿ ರಾಮನ ಮೂರ್ತಿ ತಂದು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಟ್ರೆಂಡ್ ಆಯ್ತು ರಾಮಮಂದಿರ ಟ್ಯಾಟೋ!
ಕೋಟೆನಾಡು ಚಿತ್ರದುರ್ಗದಲ್ಲಿ ರಾಮಮಂದಿರ ಟ್ಯಾಟೊ ಟ್ರೆಂಡ್ ಆಗಿದೆ. ಯುವಕರು ರಾಮಮಂದಿರ, ರಾಮ-ಹನುಮ ಚಿತ್ರದ ಟ್ಯಾಟೋ ಹಾಕಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಯುವಕರು ರಾಮಜಪ ಮಾಡ್ತಿದ್ದಾರೆ. ಮೈಸೂರಿನಲ್ಲಿ ಶ್ರೀರಾಮನಿಗಾಗಿ 111 ಅಡಿ ಉದ್ದದ ಅಗರಬತ್ತಿ ಸಿದ್ಧಗೊಂಡಿದೆ. ರಂಗರಾವ್ ಅಂಡ ಸನ್ಸ್‌ನಿಂದ 111 ಅಡಿ ಉದ್ದದ ಅಗರಬತ್ತಿ ತಯಾರಿಸಿದ್ದು, ಪರಂಪರಾ, ಬ್ರಹ್ಮ ವಿಷ್ಣು ಮಹೇಶ್ವರ ಹೆಸರಿನಲ್ಲಿ 111 ಅಡಿ ಅಗರಬತ್ತಿ ತಯಾರಿಸಲಾಗಿದೆ.
ಕಲಾವಿದರ ಕೈಯಲ್ಲಿ ಅರಳಿದ ಭವ್ಯ ರಾಮಮಂದಿರ
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮಾಕಾಪೂರು ಗ್ರಾಮದ ಕಲಾವಿದ ರಾಮಜಪ ಮಾಡಿದ್ದಾನೆ. 10 ರೂಪಾಯಿ ಸಂತೂರ್ ಸೋಪ್ನಲ್ಲಿ ಶ್ರೀರಾಮನನ್ನು ಬಿಡಿಸಿದ್ದಾನೆ. ಇನ್ನೂ ಗದಗ ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಯುವಕ ನಾಗರಾಜ ಕಮ್ಮಾರ 15 ಕೆಜಿ ಜೋಳ, 2 ಕೆಜಿ ಅಕ್ಕಿಯಲ್ಲಿ ರಾಮಮಂದಿರದ ಮಾದರಿ ಬಿಡಿಸಿದ್ದು, ಇದು 12 ಅಡಿ ಎತ್ತರ, 10 ಅಡಿ ಅಗಲ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.



