ಕನ್ನಡ ಚಿತ್ರರಂಗದ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ತಮ್ಮ ವೈಯಕ್ತಿಕ ಜೀವನ ಮತ್ತು ಒಂಟಿತನದ ಬಗ್ಗೆ ನೀಡಿರುವ ಮನಬಿಚ್ಚಿದ ಹೇಳಿಕೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರದ ಬೆಳವಣಿಗೆಗಳ ಬೆನ್ನಲ್ಲೇ ರಕ್ಷಿತ್ ಮಾತುಗಳು ಹೆಚ್ಚಿನ ಗಮನ ಸೆಳೆದಿವೆ. ತಮಗೆ ‘ಅಟ್ಯಾಚ್ಮೆಂಟ್’ನಲ್ಲಿ ನಂಬಿಕೆಯಿಲ್ಲ ಮತ್ತು ಏಕಾಂಗಿಯಾಗಿ ಇರುವುದರಲ್ಲೇ ಅತೀವ ಸುಖವಿದೆ ಎಂದು ರಕ್ಷಿತ್ ಹೇಳಿಕೊಂಡಿದ್ದಾರೆ.
“ನಾನು ಯಾರಿಗೂ ಒತ್ತಡ ಹೇರುವುದಿಲ್ಲ ಮತ್ತು ಯಾರಿಂದಲೂ ಒತ್ತಡವನ್ನು ತೆಗೆದುಕೊಳ್ಳುವುದಿಲ್ಲ” ಎಂದು ತಮ್ಮ ಜೀವನದ ಸರಳ ಸೂತ್ರವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದಕ್ಕೆ ಕಾರಣ ನೀಡಿದ ಅವರು, ತಾವು ಸೃಷ್ಟಿಸುವ ಪಾತ್ರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಈ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ.
ಪ್ರಸ್ತುತ ಹೊಸ ಸ್ಕ್ರಿಪ್ಟ್ ಕೆಲಸ ಹಾಗೂ ಧ್ಯಾನದಲ್ಲಿ ಮುಳುಗಿರುವ ರಕ್ಷಿತ್ ಅವರಿಗೆ ಟೈಮ್, ಜಾಗ ಅಥವಾ ವ್ಯಾಮೋಹದಂತಹ ಪರಿಕಲ್ಪನೆಗಳ ಮೇಲೆ ಅಷ್ಟಾಗಿ ನಂಬಿಕೆಯಿಲ್ಲವಂತೆ.


