Tuesday, January 27, 2026
26.9 C
Bengaluru
Google search engine
LIVE
ಮನೆ#Exclusive NewsTop Newsಜಲಮಂಡಳಿಯ ಮಳೆನೀರು ಕೊಯ್ಲು ಜಾಗೃತಿ ಹಾಗೂ ಕಾವೇರಿ ನೀರಿನ ಸಂಪರ್ಕ ಅಭಿಯಾನಕ್ಕೆ ಚಾಲನೆ-ಡಿಸಿಎಂ ಶಿವಕುಮಾರ್‌

ಜಲಮಂಡಳಿಯ ಮಳೆನೀರು ಕೊಯ್ಲು ಜಾಗೃತಿ ಹಾಗೂ ಕಾವೇರಿ ನೀರಿನ ಸಂಪರ್ಕ ಅಭಿಯಾನಕ್ಕೆ ಚಾಲನೆ-ಡಿಸಿಎಂ ಶಿವಕುಮಾರ್‌

ಬೆಂಗಳೂರು: ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆಯ ಪರಿಹಾರಕ್ಕೆ ಮಳೆನೀರು ಕೊಯ್ಲು ಪದ್ದತಿಯ ಸಮರ್ಪಕ ಅಳವಡಿಕೆ ಬಹಳ ಪ್ರಾಮುಖ್ಯವಾಗಿದೆ. ಈ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಡಿ.ಕೆ ಶಿವಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ವಿಧಾನಸೌಧದ ಪೂರ್ವ ಭಾಗದಲ್ಲಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ, ಯುನೈಟೆಡ್‌ ನೇಷನ್ಸ್‌ – ಇನೋವೇಷನ್ಸ್‌ ಪ್ರಾಜೆಕ್ಟ್‌ ಫಾರ್‌ ವಾಟರ್‌ ಸೆಕ್ಯೂರಿಟಿ ಇನ್‌ ಬೆಂಗಳೂರು ಸಿಟಿ ಯೋಜನೆಗೆ, ಮಳೆ ನೀರು ಕೊಯ್ಲು ಜಾಗೃತಿ ಹಾಗೂ ಮನೆ ಬಾಗಿಲಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ವರ್ಷ ಬೆಂಗಳೂರು ನಗರ ತೀವ್ರ ನೀರಿನ ಅಭಾವ ಎದುರಿಸಿತು. ಈ ಸಂಧರ್ಭದಲ್ಲಿ ಒತ್ತಡವನ್ನು ಸಹಿಸಿಕೊಂಡು ಬೆಂಗಳೂರು ಜಲಮಂಡಳಿಯ ಎಲ್ಲರೂ ಹಗಲಿರುಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಮೂಲಕ ಸರಕಾರಕ್ಕೆ ಯಾವುದೇ ಮುಜುಗರವಾಗದಂಥೆ ಪರಿಸ್ಥಿತಿ ನಿಭಾಯಿಸಿದ್ದಾರೆ. ಇದಕ್ಕೆ ಸರಕಾರದ ಪರವಾಗಿ ಜಲಮಂಡಳೀಯ ಎಲ್ಲಾ ಸಿಬ್ಬಂದಿಗಳೂ, ನೌಕರರರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದರಲ್ಲೂ ಚುನಾವಣೆಯ ಸಂಧರ್ಭದಲ್ಲಿ ಯಾವುದೇ ತೊಡಕಿಲ್ಲದೇ ಪರಿಸ್ಥಿತಿ ನಿರ್ವಹಣೆ ಶ್ಲಾಘನೀಯ ಎಂದರು.

ಯುನೈಟೆಡ್‌ ನೇಷನ್ಸ್‌ – ಇನೋವೇಷನ್ಸ್‌ ಪ್ರಾಜೆಕ್ಟ್‌ ಫಾರ್‌ ವಾಟರ್‌ ಸೆಕ್ಯೂರಿಟಿ ಇನ್‌ ಬೆಂಗಳೂರು ಸಿಟಿ:
ಬೆಂಗಳೂರು ನಗರದಲ್ಲಿ ಜಲಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿರುವ ಸುಸ್ಥಿರ ಯೋಜನೆಗಳ ಬಗ್ಗೆ ಯುನೈಟೆಡ್‌ ನೇಷನ್ಸ್‌ ಕ್ಲೈಮೇಟ್‌ ಚೇಂಜ್‌ ಸಂಸ್ಥೆಯು ಪ್ರಶಂಸಿದೆ. ಅದರ ಜೊತೆಯಲ್ಲಿಯೇ, ಇನೋವೇಷನ್ಸ್‌ ಪ್ರಾಜೆಕ್ಟ್‌ ಫಾರ್‌ ವಾಟರ್‌ ಸೆಕ್ಯೂರಿಟಿ ಇನ್‌ ಬೆಂಗಳೂರು ಸಿಟಿ ಯೋಜನೆಯ ಅನುಷ್ಟಾನಕ್ಕೂ ಕೈಜೋಡಿಸಲು ಮುಂದಾಗಿದೆ. ಸಮಪರ್ಕ ನೀರು ನಿರ್ವಹಣೆ, ಮಳೆ ನೀರು ಕೊಯ್ಲು ಪದ್ದತಿಯ ಅಳವಡಿಕೆ, ಶುದ್ದ ಸಂಸ್ಕರಿಸಿದ ನೀರನ್ನ ಕೆರೆಗಳಿಗೆ ತುಂಬಿಸುವುದು, ಆಧುನಿಕ ತಂತ್ರಜ್ಞಾನಗಳ ಮೂಲಕ ಎಕೋ ಫ್ರೇಂಡ್ಲಿ ಸಂಸ್ಕರಿಸಿದ ನೀರಿನ ಬಳಕೆಯನ್ನು ಉತ್ತೇಜಿಸುವುದು. ಅಂತರ್ಜಲ ಸಮಪರ್ಕ ನಿರ್ವಹಣೆಗಾಗಿ ಆಧುನಿಕ ತಂತ್ರಜ್ಞಾನಗಳ ಬಳಕೆ, ನೂತನ ಆದಾಯ ಮೂಲಗಳನ್ನ ಪ್ರಾರಂಭಿಸುವ ಬಗ್ಗೆ ಸಮಪರ್ಕವಾದ ಯೋಜನೆ ಇದಾಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದರು.

ಮಳೆನೀರು ಕೊಯ್ಲು ಅಳವಡಿಕೆಯ ಬಗ್ಗೆ ಜನಜಾಗೃತಿ – ವರುಣ ಮಿತ್ರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ:
ಕೇವಲ 1200 ಚದರ್ ಅಡಿ ವ್ಯಾಸದ ಕಟ್ಟಡದಿಂದ ನಾವು ಪ್ರತಿವರ್ಷ ಸುಮಾರು 1 ಲಕ್ಷ ಲೀಟರ್‌ನಷ್ಟು ನೀರನ್ನು ಸಂಗ್ರಹಿಸಬಹುದಾಗಿದೆ. ಇದು ಒಂದು ಕುಟುಂಬ ಸುಮಾರು 7 ತಿಂಗಳುಗಳ ಕಾಲ ಬಳಸಬಹುದಾಗಿದೆ. ನಗರದ ಬಹುಪಾಲು ಜನರು ಅಂತರ್ಜಲದ ಮೇಲೆ ಅವಲಂಬಿತರಾಗಿದ್ದು, ಸಮರ್ಪಕವಾಗಿ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಬಿರು ಬೇಸಿಗೆಯಲ್ಲೂ ನೀರಿನ ಕೊರತೆ ಆಗದಂತೆ ನಿಭಾಯಿಸಬಹುದಾಗಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಇದನ್ನ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ವೇಳೆ ಮಳೆ ನೀರು ಇಂಗುಗುಂಡಿಗಳನ್ನು ವೈಜ್ಞಾನಿಕವಾಗಿ ಅಳವಡಿಸುವ ಕುಶಲ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರುದ್ಯೋಗಿ ಯುವ ಜನರಿಗೆ ಉತ್ತಮ ವ್ಯವಹಾರ ಪ್ರಾರಂಭಿಸಲು ಅನುವು ಮಾಡುವ ನಿಟ್ಟಿನಲ್ಲಿ ಜಲಮಂಡಳಿ ವತಿಯಿಂದ 1000 ವರುಣಮಿತ್ರರಿಗೆ ತರಬೇತಿ ನೀಡಲು ಚಿಂತಿಸಲಾಗಿದೆ ಎಂದು ಹೇಳಿದರು.

ಮನೆಬಾಗಿಲಿಗೆ ತೆರಳಿ ಕಾವೇರಿ ಸಂಪರ್ಕ:
ಕಾವೇರಿ 5 ನೇ ಹಂತದ ಕಾಮಗಾರಿಗಳೂ ಪೂರ್ಣಗೊಂಡಿವೆ, ನಗರದ ಹೊರಭಾಗದಲ್ಲಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ನೀಡುವ ಕಾರ್ಯಕ್ಕೆ ಸದ್ಯದಲ್ಲೇ ಚಾಲನೆ ನೀಡಲಾಗುವುದು. ಇಂದು ಈ ಪ್ರದೇಶಗಳಲ್ಲಿ ಸಂಪರ್ಕ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಜನರ ಮನೆಬಾಗಿಲಿಗೆ ತೆರಳಿ ಸಂಪರ್ಕ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ವಿ ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ, ಬ್ರಾಂಡ್‌ ಬೆಂಗಳೂರು ಯೋಜನೆಯ ಅಡಿಯಲ್ಲಿ ಬೆಂಗಳೂರು ಜಲಮಂಡಳಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಬೆಳೆಯುತ್ತಿರುವ ಬೆಂಗಳೂರು ನಗರವನ್ನ ಇನ್ನಷ್ಟು ಸುಂದರಗೊಳಿಸುವ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಸಜ್ಜಾಗುತ್ತಿದೆ. ಯುನೈಟೈಡ್‌ ನೇಷನ್ಸ್‌ ಕ್ಲೈಮೇಟ್‌ ಸಂಸ್ಥೆಯ ಸಹಯೋಗದಲ್ಲಿ ಇನ್ನಷ್ಟು ಸುಸ್ಥಿರ ಯೋಜನೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಾಗೃತಿ ಅಭಿಯಾನದ ವಾಹನಗಳಿಗೆ ಚಾಲನೆ ನೀಡಲಾಯಿತು. ಬಿಬಿಎಂಪಿ ಆಯುಕ್ತರಾದ ತುಷಾರ್‌ ಗಿರಿನಾಥ್‌, ಬಿಡಿಎ ಆಯುಕ್ತರಾದ ಜಯರಾಂ, ಉಪಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿಗಳಾದ ರಾಜೇಂದ್ರ ಚೋಳನ್‌, ಪ್ರಧಾನ ಮುಖ್ಯ ಎಂಜನಿಯರ್ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments