ಲೋಕಸಭೆ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿ ಇವೆ. ರಾಜಕೀಯ ಸಮೀಕರಣಗಳು ಸಹಜವಾಗಿಯೇ ಬದಲಾಗುತ್ತಿವೆ.
ಕಾಂಗ್ರೆಸ್ ಟಾಪ್ ಲೀಡರ್ ರಾಹುಲ್ ಗಾಂಧಿ (Rahul Gandhi) ಈ ಬಾರಿ ತೆಲಂಗಾಣದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಖಮ್ಮಂ (Khammam) ಇಲ್ಲವೇ ಭುವನಗಿರಿ (Bhuvanagiri)ಯಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುವ ಬಗ್ಗೆ ಕಾಂಗ್ರೆಸ್ ಪಡಸಾಲೆಯಲ್ಲಿ ಚರ್ಚೆಗಳು ನಡೆದಿವೆ.ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಚರ್ಚೆ ನಡೆಸಿದ್ದಾರೆ.
ಖಮ್ಮಂ ಇಲ್ಲವೇ ಭುವನಗಿರಿಯ ಜೊತೆಗೆ ಉತ್ತರ ಪ್ರದೇಶದ ಅಮೇಠಿ(Amethi)ಯಿಂದಲೂ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಸೋನಿಯಾ ಗಾಂಧಿ ಸಂಸದೆ ಆಗಿರುವ ರಾಯ್ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದೆ.
ವಯನಾಡ್ನಲ್ಲಿ ಡಿ ರಾಜಾ ಪತ್ನಿ ಸ್ಪರ್ಧೆ
ಸದ್ಯ ರಾಹುಲ್ ಗಾಂಧಿ ಸಂಸದರಾಗಿರುವ ವಯನಾಡಿ(Wayanad)ನಲ್ಲಿ ಐಎನ್ಡಿಐಎ ಕೂಟದ ಪ್ರಮುಖ ಅಂಗಪಕ್ಷ ಸಿಪಿಐ ಸ್ಪರ್ಧೆ ಮಾಡಲು ತೀರ್ಮಾನಿಸಿದೆ.
ಸಿಪಿಐ (CPI)ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನೀ ರಾಜಾ ವಯನಾಡಿನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಸಿಪಿಐ ಪ್ರಕಟಿಸಿದೆ.
ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಜೊತೆ ಚರ್ಚೆ ನಡೆಸದೇ ಸಿಪಿಐ ಏಕಪಕ್ಷೀಯವಾಗಿ ಈ ನಿರ್ಣಯ ತೆಗೆದುಕೊಂಡಿದೆ.
ಐಎನ್ಡಿಐಎ ಕೂಟದ ಮತ್ತೊಂದು ಅಂಗಪಕ್ಷ ಐಯುಎಂಲ್ ಕೂಡ ವಯನಾಡಿನಲ್ಲಿ ಕಣಕ್ಕೆ ಇಳಿಯಲು ಚಿಂತನೆ ನಡೆಸಿದೆ. ಹೀಗಾಗಿ ವಯನಾಡಿನಲ್ಲಿ ರಾಹುಲ್ ಗಾಂಧಿ ಮತ್ತೆ ಸ್ಪರ್ಧಿಸುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗಿದೆ.