ನವದೆಹಲಿ: ಭದ್ರತೆ ಕುರಿತ ಸಂಪುಟ ಸಮಿತಿಯಲ್ಲಿ ಭಾರತ ಸರ್ಕಾರ ಮಂಗಳವಾರ ಭಾರತದ ಅತಿದೊಡ್ಡ ಫೈಟರ್ ಜೆಟ್ ಒಪ್ಪಂದಕ್ಕೆ ಅನುಮೂದನೆ ನೀಡಿದೆ. ಇದು ಭಾರತೀಯ ನೌಕಾಪಡೆಗೆ 26 ರಫೇಲ್ ಸಾಗರ ಯುದ್ಧ ವಿಮಾನಗಳ ಖರೀದಿಗೆ ಅವಕಾಶ ನೀಡಲಿದೆ. ಈ ಸಂಬಂಧ ಭಾರತ ಸರ್ಕಾರವು ಫ್ರಾನ್ಸ್ ಜೊತೆಗೆ 63 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಳ್ಳಲಿದೆ.
ಈ ಒಪ್ಪಂದವು 22 ಸಿಂಗಲ್-ಸೀಟರ್ ಮತ್ತು ನಾಲ್ಕು ಟ್ವಿನ್-ಸೀಟರ್ ರಫೇಲ್ ಸಾಗರ ಜೆಟ್‌ಗಳನ್ನು ಒಳಗೊಂಡಿರಲಿದೆ. ಯುದ್ಧ ವಿಮಾನಗಳ ನಿರ್ವಹಣೆ, ವ್ಯವಸ್ಥಾಪನಾ ಬೆಂಬಲ, ಸಿಬ್ಬಂದಿ ತರಬೇತಿ, ಮತ್ತು ಹೊಣೆಗಾರಿಕೆಯನ್ನು ಹೊಂದಿದೆ. ಜೊತೆಗೆ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಸಮಗ್ರ ಪ್ಯಾಕೇಜ್ ಅನ್ನು ಕೂಡ ಈ ಒಪ್ಪಂದ ಒಳಗೊಂಡಿದೆ.
ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು 5 ವರ್ಷಗಳ ನಂತರ ರಫೇಲ್ ಜೆಟ್‌ಗಳು ಸಿಗುವ ನಿರೀಕ್ಷೆಯಿದೆ. ಇವುಗಳನ್ನು ಭಾರತದ ಮೊದಲ ಸ್ವದೇಶಿ ವಿಮಾನವಾಹಕ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್‌ನಲ್ಲಿ ನಿಯೋಜಿಸಲಾಗುವುದು. ನೌಕಾಪಡೆಯಲ್ಲಿ ಸದ್ಯ ಇರುವ MiG-29K ಸ್ಥಾನದಲ್ಲಿ ಇವುಗಳು ಕಾರ್ಯಾಚರಣೆ ನಡೆಸಲಿವೆ.
ಭಾರತೀಯ ವಾಯುಪಡೆ (ಐಎಎಫ್) ಈಗಾಗಲೇ ಅಂಬಾಲಾ ಮತ್ತು ಹಶಿಮಾರಾ ನೆಲೆಗಳಲ್ಲಿ 36 ರಫೇಲ್ ಜೆಟ್‌ಗಳನ್ನು ಹೊಂದಿದೆ. ಹೊಸ ರಫೇಲ್ ಯುದ್ಧ ವಿಮಾನಗಳ ಒಪ್ಪಂದವು ಇತರ ವಿಮಾನಗಳಿಗೆ ಆಗಸದಲ್ಲೇ ಇಂಧನ ತುಂಬಿಸುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಐಎನ್ಎಸ್ ವಿಕ್ರಾಂತ್‌ನಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಅಳವಡಿಸಿದ ಬಳಿಕ, ಮಿಗ್-29ಕೆ ವಿಮಾನಗಳು ಐಎನ್ಎಸ್ ವಿಕ್ರಮಾದಿತ್ಯದಲ್ಲಿ ನಿಯೋಜಿಸಲಾಗುವುದು. ಇದರಿಂದ ನೌಕಾಪಡೆಯ ಶಕ್ತಿಯೂ ಹೆಚ್ಚಲಿದೆ.