ಬೆಂಗಳೂರು: ಗೋಬಿ, ಕಬಾಬ್, ಪಾನಿಪುರಿಯಲ್ಲಿ ಹಾನಿಕಾರಕ ಅಂಶಗಳ ಪತ್ತೆ ಬಳಿಕ ಈಗ ತರಕಾರಿ ಸರದಿ ಎದುರಾಗಿದೆ. ಬೆಂಗಳೂರಿನ 300ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಆಹಾರ ಇಲಾಖೆ ವಿವಿಧ ತರಕಾರಿಗಳ ಕ್ವಾಲಿಟಿ ಟೆಸ್ಟ್ ಮಾಡುತ್ತಿದೆ. ತರಕಾರಿಗಳಲ್ಲಿನ ಹಾನಿಕಾರಕ ಅಂಶಗಳನ್ನು ಪತ್ತೆಹಚ್ಚಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.
ಕೆಲ ತಿಂಗಳ ಹಿಂದೆ ಗೋಬಿ, ಕಬಾಬ್‌ಗೆ ಬಳಸುವ ಕಲರ್‌ಗಳಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಇವೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಕಲರ್ ಬಳಕೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಇತ್ತೀಚಿಗೆ ಪಾನಿಪುರಿಯಲ್ಲೂ ಹಾನಿಕಾರಕ ಅಂಶ ಇರೋದನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದರು. ಇದೀಗ ತರಕಾರಿಗಳ ಗುಣಮಟ್ಟ ಪರಿಶೀಲಿಸಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ. ತರಕಾರಿಗಳನ್ನು ಟೆಸ್ಟ್ ಮಾಡುವ ಉದ್ದೇಶದಿಂದ ಬೆಂಗಳೂರಿನ 300ಕ್ಕೂ ಹೆಚ್ಚು ಪ್ರದೇಶಗಳಿಂದ ತರಕಾರಿಗಳನ್ನು ಸಂಗ್ರಹ ಮಾಡಿದ್ದಾರೆ.
ಒಟ್ಟಾರೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಆಹಾರ ಮತ್ತು ಸುರಕ್ಷತಾ ಇಲಾಖೆ ಕ್ವಾಲಿಟಿ ಚೆಕ್ ಮಾಡುತ್ತಿದ್ದು ಯಾವೆಲ್ಲಾ ಹಾನಿಕಾರಕ ಅಂಶ ಇವೆ ಎಂದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಒಂದು ವೇಳೆ ಹಾನಿಕಾರಕ ಅಂಶಗಳು ಪತ್ತೆಯಾದರೆ ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ.