ಬೆಂಗಳೂರು: ಇಂದು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 4ನೇ ಪುಣ್ಯಸ್ಮರಣೆ ಹಿನ್ನೆಲೆ ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯ ಬಳಿ ಕುಟುಂಬಸ್ಥರು, ಗಣ್ಯರು ಮತ್ತು ಲಕ್ಷಾಂತರ ಅಭಿಮಾನಿಗಳು ತಮ್ಮ ಪ್ರೀತಿಯ ನಾಯಕನಿಗೆ ಪ ಶ್ರದ್ಧಾಂಜಲಿ ಸಲ್ಲಿಸಿದರು.
ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯಿಂದ ಇಂದಿಗೆ ನಾಲ್ಕು ವರ್ಷಗಳು ಆಗಿದ್ದು, ಅವರ ನಗು, ಸರಳತೆ, ಜನಪರ ಕಾರ್ಯಗಳು, ಮತ್ತು ಚಿತ್ರರಂಗಕ್ಕೆ ನೀಡಿದ ಕೊಡುಗೆ ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದೆ. ಇಂದಿನ ಈ ವಿಶೇಷ ದಿನದಂದು, ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಗಳು ದೃಷ್ಟಿ, ಸಹೋದರ ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಸಮಾಧಿಯ ಬಳಿ ಒಟ್ಟುಗೂಡಿ, ಭಾವಪೂರ್ಣ ಪೂಜೆ ಸಲ್ಲಿಸಿದರು.
ಕಂಠೀರವ ಸ್ಟುಡಿಯೋದ ಸಮಾಧಿ ಸ್ಥಳಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ, ಹಳ್ಳಿಗಳಿಂದ, ಸಾಗರೋಪಾದಿಯಲ್ಲಿ ಆಗಮಿಸಿದ ಅಭಿಮಾನಿಗಳ ದಂಡು, ಅಪ್ಪುಗೆ ಪುಷ್ಪನಮನ ಸಲ್ಲಿಸಿತು. ಅಪ್ಪುಗೆ ಇಷ್ಟವಾಗುತ್ತಿದ್ದ ತಿಂಡಿ, ಸಿಹಿತಿನಿಸುಗಳನ್ನು ಇಡುವ ಮೂಲಕ ಕುಟುಂಬಸ್ಥರು ಮತ್ತು ಅಭಿಮಾನಿಗಳು ತಮ್ಮ ಗೌರವವನ್ನು ತೋರಿದರು. ಒಂದೆಡೆ ಅಪ್ಪು ಅವರ ಸಿನಿಮಾಗಳ ಹಾಡುಗಳು ಮೊಳಗುತ್ತಿದ್ದರೆ, ಇನ್ನೊಂದೆಡೆ ಅಭಿಮಾನಿಗಳ ಕಣ್ಣೀರು ಅವರ ಬಗ್ಗೆ ಇದ್ದ ಪ್ರೀತಿಯನ್ನು ಪ್ರತಿಬಿಂಬಿಸಿತು.
ಪುನೀತ್ ರಾಜ್‌ಕುಮಾರ್ ಅವರ ಜನಪರ ಕಾರ್ಯಗಳ ಗೌರವಾರ್ಥವಾಗಿ, ರಾಜ್ಯಾದ್ಯಂತ ವಿವಿಧ ಕಡೆ ಅನ್ನದಾನ, ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಅಭಿಮಾನಿಗಳಿಗೆ ಧನ್ಯವಾದ ಸೂಚಿಸಿದರು. ಪುನೀತ್‌ಗೆ ಜನರೇ ದೇವರು. ಅವರ ಪ್ರೀತಿ, ಅವರ ಕಾರ್ಯಗಳನ್ನು ಇಂದಿಗೂ ಜನರು ನೆನಪಿನಲ್ಲಿಟ್ಟುಕೊಂಡಿರುವುದು ನಮಗೆ ಶಕ್ತಿಯನ್ನು ನೀಡುತ್ತದೆ, ಎಂದು ಭಾವುಕರಾಗಿ ಹೇಳಿದರು.


