
ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಾಲೀಕರಿಗೆ ನ್ಯಾಯಯುತ ಪರಿಹಾರ ಒದಗಿಸಲು ಆಸ್ತಿ ಮಾರ್ಗಸೂಚಿ ದರಗಳ ಕಾಲಕಾಲಕ್ಕೆ ಪರಿಷ್ಕರಣೆ ಮಾಡುವುದು ಅನಿವಾರ್ಯ ಎಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ. ಬಿಜೆಪಿ ಎಂಎಲ್‌ಸಿ ಕೆ.ಎಸ್. ನವೀನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 2019ಕ್ಕೂ ಮೊದಲು ನಿಗದಿಪಡಿಸಿದ ದರಗಳ ಆಧಾರದ ಮೇಲೆ ಪ್ರಸ್ತುತ ರೈತರಿಗೆ ಪರಿಹಾರ ನೀಡುವುದು ಎಷ್ಟು ಸರಿ ಎಂಬ ಕುರಿತು ಸ್ಪಷ್ಟನೆ ನೀಡಿದರು.
2013ರ ‘ಭೂಸ್ವಾಧೀನದಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ’ಯ ಪ್ರಕಾರ ಪರಿಹಾರದ ವ್ಯಾಖ್ಯಾನ ಸ್ಪಷ್ಟವಾಗಿದೆ . ಒಮ್ಮೆ ಭೂಸ್ವಾಧೀನದ ಪ್ರಾಥಮಿಕ ಅಧಿಸೂಚನೆ ಹೊರಬಿದ್ದ ನಂತರ, ಆ ಜಮೀನಿನ ಮಾರ್ಗಸೂಚಿ ದರವನ್ನು ಪರಿಷ್ಕರಿಸಲು ಬರುವುದಿಲ್ಲ. ಬದಲಾಗಿ, ಅಸ್ತಿತ್ವದಲ್ಲಿರುವ ಮಾರ್ಗಸೂಚಿ ದರ ಅಥವಾ ಕಳೆದ ಮೂರು ವರ್ಷಗಳ ನೋಂದಾಯಿತ ಮಾರಾಟ ಪತ್ರಗಳ ಸರಾಸರಿ ಮೌಲ್ಯ ಇವೆರಡರಲ್ಲಿ ಯಾವುದು ಹೆಚ್ಚಿರುತ್ತದೆಯೋ ಅದನ್ನು ಪರಿಹಾರಕ್ಕೆ ಆಧಾರವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ದರಗಳನ್ನು ನಿಯಮಿತವಾಗಿ ಪರಿಷ್ಕರಿಸದಿದ್ದರೆ ರೈತರಿಗೆ ಖಂಡಿತಾ ನಷ್ಟವಾಗುತ್ತದೆ. ಅದಕ್ಕಾಗಿಯೇ ಸರ್ಕಾರ ಮಾರ್ಗಸೂಚಿ ದರಗಳ ಹೆಚ್ಚಳವನ್ನು ಬೆಂಬಲಿಸುತ್ತದೆ. ಆದರೆ, ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿದಾಗಲೆಲ್ಲಾ ಸಾರ್ವಜನಿಕರಿಂದ ಆಕ್ಷೇಪಣೆಗಳು ವ್ಯಕ್ತವಾಗುತ್ತವೆ ಎಂದರು. ಒಂದು ನಿವೇಶನದ ಮಾರ್ಗಸೂಚಿ ದರ 2 ಲಕ್ಷ ರೂಪಾಯಿ ಇದ್ದರೆ, ಅದರ ಮಾರುಕಟ್ಟೆ ಮೌಲ್ಯ 70 ರಿಂದ 80 ಲಕ್ಷ ರೂಪಾಯಿ ಇರುತ್ತದೆ. ಇಂತಹ ವ್ಯತ್ಯಾಸಗಳು ಕಪ್ಪು ಹಣದ ವ್ಯವಹಾರಕ್ಕೆ ಪ್ರೇರಣೆ ನೀಡುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇಂತಹ ಕಾನೂನುಬಾಹಿರ ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮಾರ್ಗಸೂಚಿ ದರಗಳನ್ನು ಸರಿಪಡಿಸುವುದೇ ಏಕೈಕ ಪರಿಹಾರ ತಿಳಿಸಿದರು.




