ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಜನ್-12 ಶೋನಡೆಯುತ್ತಿರುವ ಜಾಲಿವುಡ್ ಸ್ಟುಡಿಯೊಗೆ ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಸ್ಟುಡಿಯೋಗೆ ಅಧಿಕಾರಿಗಳು ಬೀಗ ಜಡಿದಿದ್ದು, ಸರ್ಕಾರ ಕೊನೆಗೆ ಸಂಸ್ಥೆಯ ಮನವಿ ಮೇರೆಗೆ ಶೋ ಮುಂದುವರಿಸಲು ಅವಕಾಶ ನೀಡಿದೆ..
ಈ ಹಿನ್ನೆಲೆ ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಮನಗರದ ಜಾಲಿವುಡ್ ಸ್ಟುಡಿಯೋ ಗೇಟ್ ಬಳಿ ಜಮಾಯಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಸರ್ಕಾರದ ಈ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರಾತ್ರೋರಾತ್ರಿ ಯಾವ ಆಧಾರದ ಮೇಲೆ ಬಿಗ್ ಬಾಸ್‌ಗೆ ಅನುಮತಿ ನೀಡಲಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಸ್ಟುಡಿಯೋ ಆಡಳಿತವು ಪರಿಸರ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪವಿದೆ, ಈ ಅನುಮತಿಯನ್ನು ಅಕ್ರಮವೆಂದು ಕರೆದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾಲಿವುಡ್ ಸ್ಟುಡಿಯೋ ಗೇಟ್ ತೆರೆಯುತ್ತಿದ್ದಂತೆ ಬಿಗ್ ಬಾಸ್ ಮನೆಯನ್ನೂ ಮತ್ತೆ ತೆರೆಯಲಾಗಿದೆ. ಸ್ಪರ್ಧಿಗಳು ಒಳಗೆ ಆಗಮಿಸಿ, ಶೂಟಿಂಗ್‌ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ಈ ಶೋ ನಡೆಯುತ್ತಿದೆ. ಸರ್ಕಾರ ಈ ರೀತಿಯ ಕಾರ್ಯಕ್ರಮಗಳಿಗೆ ಒತ್ತಡಕ್ಕೆ ಮಣಿದು ಅನುಮತಿ ನೀಡಿರುವುದು ಸರಿಯಲ್ಲ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಮುಖಂಡರು ಆರೋಪಿಸಿದ್ದಾರೆ.


