ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಗಾಂಧಿ ಹೆಸರು ಅಕ್ರಮ ಹಣ ವರ್ಗಾವಣೆ ಕೇಸಿನಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಆರೋಪಿಯಾಗಿ ಅಲ್ಲದಿದ್ದರು ಶಸ್ತ್ರಾಸ್ತ್ರ ಖರೀದಿ ಹಗರಣದ ಆರೋಪಿ ಸಂಜಯ್ ಬಂಢಾರಿ ಜೊತೆಗಿನ ಹಣದ ವ್ಯವಹಾರ, ಹಾಗೂ ಹರಿಯಾಣದ ಫರಿದಾಬಾದ್ ನಲ್ಲಿ ಭೂಮಿ ಖರೀದಿ ವಿಚಾರವಾಗಿ ಇ ಡಿ ಪ್ರಿಯಾಂಕ ಗಾಂಧಿ ಹೆಸರು ಉಲ್ಲೇಖಿಸಿದೆ.
ಹರಿಯಾಣದ ಫರಿದಾಬಾದ್ ನಲ್ಲಿ ಕೃಷಿ ಭೂಮಿ ಖರೀದಿಸುವಲ್ಲಿಯೂ ಪ್ರಿಯಾಂಕ ಪಾತ್ರವಿದೆ ಎಂದು ಚಾರ್ಜ್ ಶೀಟ್ ನಲ್ಲಿ ಇಡಿ ಆರೋಪಿಸಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಗೆ ಉರುಳು ಸುತ್ತಿದ್ದ ಇಡಿ ಇದೀಗ ಮಗಳು ಪ್ರಿಯಾಂಕ ಗಾಂಧಿಗೆ ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್ ಶೀಟ್ ಸಲ್ಲಿಸಿದೆ.
ಇನ್ನು ಈ ಪ್ರಕರಣದ ಹಿನ್ನೆಲೆಯನ್ನ ನೋಡೋದಾದ್ರೆ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್ ಎಲ್ ಪಹ್ವಾರಿಂದ ಹರಿಯಾಣದ ಫರಿದಾಬಾದ್ ನಲ್ಲಿ ರಾಬರ್ಟ್ ವಾದ್ರೆ 2006ರಲ್ಲಿ 40 ಎಕರೆಯಷ್ಟು ಕೃಷಿ ಭೂಮಿಯನ್ನ ಖರೀದಿಸಿದ್ರು. ಬಳಿಕ 2010ರಲ್ಲಿ ಅದನ್ನು ಅದೇ ಏಜೆಂಟ್ಗೆ ವಾಪಸ್ ಮಾರಾಟ ಮಾಡಿದ್ದರು. ಇದರಲ್ಲಿ ಎನ್ ಆರ್ ಐ ಉದ್ಯಮಿ ಸಿಸಿ ಥಂಪಿ ಎಂಬುವವರ ಪಾತ್ರವೂ ಇದೆ. ಈ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.
ಇನ್ನು ಶಸ್ತ್ರಾಸ್ತ್ರ ಖರೀದಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಜಯ್ ಬಂಡಾರಿ ಎಂಬುವವರಿಂದ ರಾಬಟ್ರ್ ವಾದ್ರ ಮತ್ತು ಪ್ರಿಯಾಂಕ ಗಾಂಧಿ ಲಂಡನ್ ನಲ್ಲಿ ಒಂದು ನಿವೇಶನ ಖರೀದಿಸಿದ್ರು. ಸಂಜಯ್ ಬಂಢಾರಿ ಅಕ್ರಮವಾಗಿ ಸಂಪಾದಿಸಿದ ನಿವೇಶನವನ್ನ ಪ್ರಿಯಾಂಕ ಮತ್ತು ರಾಬರ್ಟ್ ಖರೀದಿ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ.
ಕೃಷಿ ಭೂಮಿ ಮಾರಾಟದಲ್ಲಿ ಪ್ರಿಯಾಂಕಾ ಗಾಂಧಿ ಅವರ ಪಾತ್ರವೂ ಇದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಆದರೆ, ಪ್ರಕರಣದಲ್ಲಿ ಪ್ರಿಯಾಂಕಾ ಅವರನ್ನು ನೇರ ಆರೋಪಿಯನ್ನಾಗಿ ಹೆಸರಿಸಲಾಗಿಲ್ಲ. ಪ್ರಕರಣದ ಆರೋಪಿಗಳಾದ ಉದ್ಯಮಿ ಚೆರುವತ್ತೂರು ಚಾಕುಟ್ಟಿ ಥಂಪಿ ಮತ್ತು ಯುಕೆ ಪ್ರಜೆ ಸುಮಿತ್ ಚಡ್ಡಾ ವಿರುದ್ಧ ಹೊಸ ಚಾರ್ಜ್ಶಿಟ್ ಸಲ್ಲಿಸಿರುವುದಾಗಿ ಇಡಿ ಹೇಳಿದೆ.
ಒಟ್ನಲ್ಲಿ ಸೋನಿಯಾ ಕುಟುಂಬಕ್ಕೆ ಮತ್ತೊಂದು ಸುತ್ತಿಗೆ ಇಡಿ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಮತ್ತು ವಾದ್ರರ ನೆತ್ತಿ ಮೇಲೆ ಈಗ ಇಡಿ ಕತ್ತಿ ತೂಗುತ್ತಿದೆ. ಮುಂದೇನಾಗುತ್ತೆ ಕಾದು ನೋಡಬೇಕಿದೆ.