ವಯನಾಡು: ವಯನಾಡಿನ ಜನ ಕೇವಲ ಒಬ್ಬ ಸಂಸತ್ ಸದಸ್ಯರನ್ನು ಆಯ್ಕೆ ಮಾಡುತ್ತಿಲ್ಲ. ಬದಲಾಗಿ ಈ ದೇಶದ ಭವಿಷ್ಯದ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಆಯ್ಕೆ ಮಾಡುತ್ತಿದ್ದೀರಿ. ಇದು ವಯನಾಡಿನ ಹಾಗೂ ಕೇರಳದ ಜನತೆಗೆ ಸಿಕ್ಕಿರುವ ಸುವರ್ಣ ಅವಕಾಶ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರ ಪರವಾಗಿ ಕೇರಳದ ತಿರುವಂಬಾಡಿ ವಿಧಾನಸಭಾ ಕ್ಷೇತ್ರದ ಮುಕ್ಕಾಂ ನಲ್ಲಿ ಚುನಾವಣಾ ಪ್ರಚಾರ ನಡೆಸಿ, ಮಾತನಾಡಿದ ಅವರು, ಪ್ರಿಯಾಂಕಾ ಗಾಂಧಿ ಅವರ ಆಯ್ಕೆಯ ಮೂಲಕ, ಶೋಷಿತರ ಬಡವರ ಕೆಳವರ್ಗದ ಜನರ ಪರವಾದ ಪ್ರಬಲವಾದ ಮತ್ತೊಂದು ದನಿ ಸಂಸತ್ತಿನಲ್ಲಿ ಮೊಳಗಿದಂತಾಗುತ್ತದೆ. ಈ ಅವಕಾಶವನ್ನು ದಯವಿಟ್ಟು ಕೈ ಚೆಲ್ಲಬೇಡಿ ಎಂದು ಮನವಿ ಮಾಡಿದರು. ಪ್ರಿಯಾಂಕಾ ಗಾಂಧಿಯವರು ತಮ್ಮ ಸಮಯ, ತಮ್ಮ ಪ್ರೀತಿ, ಚಿಂತನೆಯನ್ನು ಕೇರಳದ ಅಭಿವೃದ್ಧಿಗಾಗಿ ಮುಡುಪಾಗಿ ಇಟ್ಟಿದ್ದಾರೆ ಮತ್ತು ಇಡಲಿದ್ದಾರೆ ಎಂದು ಹೇಳಿದರು.
ಮೂರು ದಿನಗಳ ಹಿಂದೆ ಪ್ರಿಯಾಂಕಾ ಗಾಂಧಿಯವರು ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ರಾತ್ರಿ ವೇಳೆ ಬಂಡಿಪುರದಲ್ಲಿ ವಾಹನ ಸಂಚಾರ ಕುರಿತು,ಮಾತು ಕತೆ ನಡೆಸಿದರು. ಪ್ರಿಯಾಂಕಾ ಗಾಂಧಿ ಅವರು ಆಯ್ಕೆಯಾದ ನಂತರ, ಈ ವಿಚಾರವಾಗಿ ಎರಡು ರಾಜ್ಯಗಳ ಪ್ರತಿನಿಧಿಗಳು ಕುಳಿತು ಸಮಸ್ಯೆ ಬಗೆಹರಿಸುವ ಬಗ್ಗೆ ಯೋಚಿಸಲಾಗುವುದು” ಎಂದು ಹೇಳಿದರು. ಎರಡು ತಿಂಗಳ ಹಿಂದೆ ನಾನು ವೈಯಕ್ತಿಕವಾಗಿ ಸಮೀಕ್ಷೆ ನಡೆಸುವ ತಂಡವನ್ನು ಕಳುಹಿಸಿ, ಕಾಂಗ್ರೆಸ್ ಪಕ್ಷದ ಗೆಲುವಿನ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದೆ.


