ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಸೋಶಿಯಲ್ ಮಿಡಿಯಾ ಸೆನ್ಸೇಷನ್ ಆಗಿದ್ದವರು. ದಿಢೀರ್ ರಾಜಕಾರಣ ಪ್ರವೇಶಿಸಿದ ಅವರು ಸದ್ಯ ಶಾಸಕರಾಗಿರುವ ಜೊತೆಗೆ ತಮ್ಮದೇ ಸ್ಟೈಲಿನಿಂದ ಜನಮನ್ನಣೆ ಗಳಿಸಿದವರು.ಅದರಲ್ಲೂ ಇವರ ಹೇಳೋ ಡೈಲಾಗ್ಗಳಿಂದ ದೊಡ್ಡ ಫ್ಯಾನ್ ಬೇಸ್ ಕೂಡ ಇದೆ. ಮೈಕ್ ಹಿಡಿದು ನಿಂತರೆ ಜನರಿಗೆಲ್ಲ ಮಾತಲ್ಲೇ ಎನರ್ಜಿ ಕೊಡೋ ಇವರು, ರಾಜಕಾರಣಕ್ಕೆ ಗುಡ್ಬೈ ಹೇಳ್ತಿದ್ದಾರಾ? ಎನ್ನುವ ಮಾತುಗಳು ಕೇಳಿಬರುತ್ತಿವೆ.
ಟಾಲಿವುಡ್ ಚಿತ್ರರಂಗದ ದಿಗ್ಗಜ ಮೆಗಾಸ್ಟಾರ್ ಚಿರಂಜೀವಿ ಅವರು ಸಾಮಾಜಿಕ ಕ್ರಾಂತಿಯ ಸಿನಿಮಾ ನಟಿಸಲು ತಯಾರಿ ನಡೆಸುತ್ತಿದ್ದಾರೆ. ಇದೇ ವಿಚಾರಕ್ಕೆ ಚಿರಂಜೀವಿ ಜೊತೆ ನಟಿಸಲು ನನಗೆ ಕರೆ ಬಂದಿದ್ದು ನಿಜ ಎಂದು ಹೇಳಿದ್ರು. ಚಿರಂಜೀವಿ ಅವರ ಚಿತ್ರವನ್ನು ನಿರ್ದೇಶಿಸುತ್ತಿರುವ ಖ್ಯಾತ ನಿರ್ದೇಶಕರೊಬ್ಬರು ಮೊನ್ನೆಯಷ್ಟೇ ನನಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎಂದು ಶಾಸಕ ಪ್ರದೀಪ್‌ಈಶ್ವರ್ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕನಾದ ಬಳಿಕ ಚಿರಂಜೀವಿ ಅವರು ನನ್ನನ್ನು ಮನೆಗೆ ಕರೆಸಿ ಒಂದು ಗಂಟೆ ಕಾಲ ಮಾತಾಡಿದ್ರು ಎಂದು ಪ್ರದೀಪ್ ಈಶ್ವರ್ ಹೇಳಿದ್ರು. ಪವನ್ ಕಲ್ಯಾಣ್ ಅವರು ಗೆದ್ದಾಗ ನಾನು ಕೂಡ ಫೋನ್ ಮಾಡಿ ವಿಶ್ ಮಾಡಿದ್ದೆ. ಚಿರಂಜೀವ ಅವರ ಜೊತೆ ಒಳ್ಳೆ ಸ್ನೇಹ ಸಂಬಂಧವಿದೆ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಟಾಲಿವುಡ್ ಸಿನಿಮಾ ನಟಿಸುವ ಅವಕಾಶದ ಬಗ್ಗೆ ಚರ್ಚೆ ನಡೆದಿರೋದು ನಿಜ. ಸದ್ಯ ಚಿರಂಜೀವಿ ಅವರು ವಿಶ್ವಾಂಬರಂ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ವಿಶ್ವಾಂಬರಂ ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ. ಈ ಸಿನಿಮಾ ನಂತರದ ಚಿತ್ರದಲ್ಲಿ ಅವಕಾಶದ ಬಗ್ಗೆ ಚರ್ಚೆ ನಡೆದಿದೆ. ಯಾವ ಪಾತ್ರ ಏನು ಎಂಬುದು ಮುಂದಿನ ದಿನಗಳಲ್ಲಿ ಅವರೇ ತಿಳಿಸಲಿದ್ದಾರೆ. ಅವರೇ ತಿಳಿಸಿದ್ರೆ ಸೂಕ್ತ ಎಂದು ಪ್ರದೀಪ್ ಈಶ್ವರ್ ಹೇಳಿದ್ರು.
ನಾನು ಚಿರಂಜೀವಿ ಫ್ಯಾನ್, ನನಗೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡ್ಬೇಕು ಎಂಬ ಆಸೆ ಕೂಡ ಇದೆ. ಒಂದು ಸಣ್ಣ ಸ್ಟೆಪ್ ಹಾಕಲು ಅವಕಾಶ ಸಿಕ್ರೂ ಅದು ನನ್ನ ಭಾಗ್ಯವೇ. ನಾನು ರಾಜಕಾರಣದಲ್ಲಿ ಕೆಲವರನ್ನ ಡ್ಯಾನ್ಸ್ ಮಾಡಿಸಿದ್ದೀನಿ. ಆದ್ರೆ ಚಿರಂಜೀವಿ ಅವರ ಜೊತೆ ಸ್ಟೆಪ್ ಹಾಕಿದ್ರೆ ಅದು ನನಗೆ ಖುಷಿ ಕೊಡುತ್ತೆ ಎಂದು ಶಾಸಕ ಪ್ರದೀಪ್ ಹೇಳಿದ್ದಾರೆ.