ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದಾರೆ. ಪಕ್ಷ ಹಾಗೂ ಶಾಸಕರ ಹಿತದೃಷ್ಟಿಯಿಂದ ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಎಂಬುದು ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ವಿಶೇಷವಾಗಿ ಮುಖ್ಯಮಂತ್ರಿ ಸ್ಥಾನ ಅಷ್ಟು ಸುಲಭವಾಗಿ ಸಿಗುವ ಹುದ್ದೆಯಲ್ಲ. ಡಿ.ಕೆ. ಶಿವಕುಮಾರ್ ಅವರ ಹಣೆಬರಹದಲ್ಲಿ ಸಿಎಂ ಆಗಬೇಕು ಎಂದು ಬರೆದಿದ್ದರೆ ಖಂಡಿತ ಆಗುತ್ತಾರೆ. ಅವರ ಗುರಿ ಈಗ 2028ರ ಚುನಾವಣೆ. ಕೆಲವರು ಅಧಿಕಾರಕ್ಕಾಗಿ ಇರುತ್ತಾರೆ, ಆದರೆ ಡಿಕೆಶಿ ಪಕ್ಷಕ್ಕೆ ನಿಷ್ಠರಾಗಿ ನೋವಿನಲ್ಲೂ ಜೊತೆಗಿದ್ದಾರೆ” ಎಂದು ಮಾರ್ಮಿಕವಾಗಿ ಎಂದರು.
ರಾಜಕಾರಣದಲ್ಲಿ ಅಧಿಕಾರ ಬಿಟ್ಟುಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚೇರ್ಮನ್ಗಳೇ ಅಧಿಕಾರ ಬಿಡಲು ಒಪ್ಪುವುದಿಲ್ಲ. ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದೆ, ಮಾರ್ಚ್ ಕಳೆಯಲಿ ಎಂದು ಕಾರಣ ನೀಡುತ್ತಾರೆ. ಕುರ್ಚಿಯನ್ನು ಅಷ್ಟು ಸುಲಭವಾಗಿ ಯಾರೂ ಬಿಡುವುದಿಲ್ಲ. ಆದರೆ ರಾಜಕಾರಣದಲ್ಲಿ ನಂಬಿಕೆ ಮುಖ್ಯ. ರಾಹುಲ್ ಗಾಂಧಿ ಅವರು ಎಲ್ಲವನ್ನೂ ಯೋಚಿಸಿ, ಎಲ್ಲರನ್ನೂ ಒಪ್ಪಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದರು.


