ರಾಜ್ಯದಲ್ಲಿರುವ ಕರ್ನಾಟಕ ಸರ್ಕಾರ ಯಾವಾಗ್ ಬೀಳುತ್ತೆ.. ಈವಾಗ್ ಬೀಳುತ್ತೆ ಅಂತ ವಿಪಕ್ಷಗಳು ಜಾಗಟೆ ಬಾರಿಸುತ್ತಿವೆ. ಡಿಸೆಂಬರ್ ಕ್ರಾಂತಿ ಬಗ್ಗೆ ಭವಿಷ್ಯ ನುಡಿಯುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಗೃಹಮಂತ್ರಿ ಡಾ.ಜಿ ಪರಮೇಶ್ವರ್ ಸರ್ಕಾರದ ಮೇಲೆ ವಿಶ್ವಾಸವೇ ಇಲ್ಲದಂತೆ ಮಾತನಾಡಿದ್ದಾರೆ. ಯಾವಾಗ ಬೀಳುತ್ತೋ? ಯಾವಾಗ ಪತನವಾಗುತ್ತೋ ಎಂಬ ದಾಟಿಯಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
ಸಂಕ್ರಾಂತಿ.. ದಸರಾ.. ದೀಪಾವಳಿ.. ಹೀಗೆ ಹಬ್ಬಗಳು ಬಂದಾಗ ಸಂಭ್ರಮ ಎಷ್ಟಿರುತ್ತೋ? ಏನೋ? ಆದ್ರೆ, ಹಬ್ಬಗಳನ್ನೇ ಆಧರಿಸಿ ಸರ್ಕಾರ ಪತನದ ಮಾತು ಆಗಾಗ ರಿಂಗಣಿಸುತ್ತಲೇ ಇರುತ್ತೆ. ಇದು ಸರ್ಕಾರಕ್ಕೆ ಭಯ ಹುಟ್ಟಿಸೋದಕ್ಕೋ? ರಾಜ್ಯದ ಜನರು ಸರ್ಕಾರದ ಮೇಲಿನ ಭರವಸೆ ಕಳೆದುಕೊಳ್ಳಲಿಕ್ಕೋ? ಸರ್ಕಾರ ಬಿದ್ದೋಗುತ್ತೆ ಅಂತ ವಿಪಕ್ಷಗಳು ಡಂಗೂರ ಸಾರುತ್ತಲಿವೆ. ಆದ್ರೀಗ ಸರ್ಕಾರದ ಭಾಗವಾಗಿರೋ ಸಚಿವರೇ ಖುದ್ದು ಭರವಸೆ ಕಳೆದುಕೊಂಡಂತೆ ಮಾತನಾಡಿದ್ದಾರೆ.
ಮುಡಾ, ವಾಲ್ಮೀಕಿ, ವಕ್ಫ್ ಹಗರಣಗಳ ನಡುವೆ ಗೃಹ ಸಚಿವ ಪರಮೇಶ್ವರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲಿ ರಾಜ್ಯದಲ್ಲಿ ಸರ್ಕಾರ ಪತನವೋ? ಅಥವಾ ಸಿಎಂ ಬದಲಾವಣೆಯಾಗ್ತಾರಾ ಎಂಬ ಪ್ರಶ್ನೆಯ ಹುಟ್ಟಿಗೆ ಕಾರಣರಾಗಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಶಾಕಿಂಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ತವರೂರು ಮೈಸೂರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಭೇಟಿ ನೀಡಿದ್ರು. ಮೈಸೂರಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಿಸುವ ವಿಚಾರವನ್ನ ಮಾತನಾಡುತ್ತಿದ್ದರು. ಈ ವೇಳೆ ಗೊತ್ತಿದ್ದೋ? ಗೊತ್ತಿಲ್ಲದೆಯೋ? ಅಚ್ಚರಿಯ ಮಾತನ್ನ ಆಡಿದ್ದಾರೆ. ಆದಷ್ಟು ಬೇಗ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಿಬಿಡಿ. ಮುಂದೆ ಏನ್ ಆಗತ್ತೋ ಗೊತ್ತಿಲ್ಲ ಎಂದಿದ್ದಾರೆ. ಇವತ್ತಿನ ರಾಜಕೀಯ ಬೆಳವಣಿಗೆ ನೋಡ್ತಿದ್ರೆ ಏನೂ ಹೇಳಲಿಕ್ಕೆ ಆಗಲ್ಲ. ಬೇಗ ನಮ್ಮ ಸರ್ಕಾರ ಇರುವಾಗಲೇ ಶಂಕುಸ್ಥಾಪನೆ ನೆರವೇರಿಸಿ ಎಂದಿದ್ದಾರೆ.
ಆದಷ್ಟು ಶೀಘ್ರವಾಗಿ ಕಟ್ಟಡದ ಶಂಕುಸ್ಥಾಪನೆ ಮಾಡಿಬಿಡಿ. ಏಕೆಂದರೆ ರಾಜಕೀಯದಲ್ಲಿ ಹೆಂಗೆಂಗೆ ಪರಿಸ್ಥಿತಿ ಬೆಳೆವಣಿಗೆ ನಡೆಯುತ್ತವೆ ಎಂದು ಹೇಳುವುದಕ್ಕೆ ಆಗಲ್ಲ. ನಮ್ಮ ಸರ್ಕಾರ ಇರುವಾಗಲೇ ಬೇಗ ಮುಗಿಸಿದರೆ ತುಂಬಾ ಒಳ್ಳೆಯದು.
ಸಿಎಂ ಸಿದ್ದರಾಮಯ್ಯಗೆ ಸ್ವಲ್ಪ ಜೋರಾಗಿಯೇ ಹೇಳಿದೆ. ನೀವು ಯಾವ ಸೀಮೆಯ ಸಿಎಂ ಅಂತ. ಕಾಂಗ್ರೆಸ್ ಪಕ್ಷದ ಚೀಫ್ ಮಿನಿಸ್ಟರ್ ನೀವು. ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಮೈಸೂರಿನಲ್ಲಿ ನೀವು ಕಟ್ಟಿಸಲೇಬೇಕು. ಮೈಸೂರಿನ ಆರ್ಕಿಟೆಕ್ಚರ್ ಯಾವ ತರ ಇದೆ. ಆ ಸಂಪ್ರದಾಯದಂತೆ ಕಚೇರಿ ನಿರ್ಮಾಣ ಮಾಡಬೇಕು. ಸುಮ್ಮನೇ ಮುಖ್ಯಮಂತ್ರಿ ಆದರೆ ಸರಿ ಹೋಗೋದಿಲ್ಲ ಎಂದು ಕೋಪ ಮಾಡಿಕೊಂಡು ಅವರಿಗೆ ಹೇಳಿದ್ದೆ.
ಗೃಹ ಸಚಿವರು ಆ ಅರ್ಥದಲ್ಲಿ ಹೇಳಿಲ್ಲ ಎಂದ ಡಿಕೆ ಶಿವಕುಮಾರ್
ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರ ಸರ್ಕಾರ ಪತನ ದಾಟಿಯ ಮಾತಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಹಲವು ಹಳೇ ಕಾಂಗ್ರೆಸ್ ಕಚೇರಿಗಳು ಶಿಥಿಲಾವಸ್ಥೆ ತಲುಪಿವೆ. ಹೀಗಾಗಿ 100 ಕಡೆ ಕಾಂಗ್ರೆಸ್ ಕಚೇರಿ ಸ್ಥಾಪನೆ ಜವಾಬ್ದಾರಿಯನ್ನ ಅವರಿಗೆ ನೀಡಲಾಗಿದೆ. ಅವರಿಗೂ ತಿಳುವಳಿಕೆ ಇದೆ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ಆಗುತ್ತಿರೋ ರಾಜಕೀಯ ಬೆಳವಣಿಗೆಗಳು ಸರ್ಕಾರದ ಒಳಗೆ ನಡುಕ ಹುಟ್ಟಿಸಿದ್ಯಾ ಎಂಬ ಪ್ರಶ್ನೆ ಮೂಡಿದೆ. ಸಚಿವರಿಗೆ ಸರ್ಕಾರದ ಅಸ್ತಿತ್ವದ ಮೇಲೆ ನಂಬಿಕೆ ಹೊರಟೋಯ್ತಾ ಎಂಬ ಚರ್ಚೆ ಈಗ ಶುರುವಾಗಿದೆ.