ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ನಾಳೆಯಿಂದ ಬೆಂಗಳೂರಿನಿಂದ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಕಹಳೆಯೂದಿದ್ದಾರೆ.
ಈ ಕುರಿತು ಇಂದು ಎಕ್ಸ್ ತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮೈಸೂರು ಚಲೋ ಪಾದಯಾತ್ರೆ ಕೇವಲ ರಾಜಕೀಯ ಹೋರಾಟವಲ್ಲ. ಇದು ಭ್ರಷ್ಟಾಚಾರದ ವಿರುದ್ಧದ ದಂಡಯಾತ್ರೆ ಎಂದು ಹೇಳಿದ್ದಾರೆ. ಆರೂವರೆ ಕೋಟಿ ಕನ್ನಡಿಗರ ಜನಕ್ರೋಶಕ್ಕೆ ದನಿಗೂಡಿಸುವ ಈ ಪ್ರಜಾಯಾತ್ರೆ ಅನೈತಿಕತೆಯ ವಿರುದ್ಧ ನೈತಿಕತೆಯ ಮೌನಯಾತ್ರೆ. ಅಧರ್ಮ ರಾಜಕಾರಣದ ವಿರುದ್ಧ ರಾಜಕಾರಣದ ಸಂಘರ್ಷ ಯಾತ್ರೆ. ಅಸತ್ಯದ ವಿರುದ್ಧ ಸತ್ಯದ ನ್ಯಾಯಯಾತ್ರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರ ಅಕ್ರಮಗಳ ವಿರುದ್ಧ ಎನ್ ಡಿ ಎ ಮಿತ್ರಕೂಟ ಹಮ್ಮಿಕೊಂಡಿರುವ ಜನಾಂದೋಲನಕ್ಕೆ ನಾಳೆ, ಶನಿವಾರ ಅಗಸ್ಟ್ 3ರಂದು ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯನವರೇ, ಈಗಲು ಕಾಲ ಮಿಂಚಿಲ್ಲ. ತಮಗೆ ಕಿಂಚಿತ್ತಾದರೂ ನೈತಿಕತೆ, ಆತ್ಮಸಾಕ್ಷಿ, ಅಂತಃಕರಣ ಅನ್ನುವುದು ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ. ಈಗ ಪ್ರಾಯಶ್ಚಿತ ಮಾಡಿಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪಕ್ಕೂ ಅವಕಾಶ ಇರುವುದಿಲ್ಲ ಎಂದು ಒತ್ತಾಯಿಸಿದ್ದಾರೆ.


