ಮಂಡ್ಯ -ಪ್ರಾಪ್ತ ಬಾಲಕಿ ಮೇಲೆ ತೀವ್ರತರ ಲೈಂಗಿಕ ದೌರ್ಜನ್ಯ ನಡೆಸಿದ್ದ ಪೋಕ್ಸೋ ಅಪರಾಧಿಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿ ಪೋಸ್ಕೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಕೆ ಆರ್ ಪೇಟೆ ತಾಲೂಕು ಶ್ರವಣಹಳ್ಳಿಯ ಗವಿಗೌಡರ ಮಗ ರಾಮಕೃಷ್ಣ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.
2024ರಲ್ಲಿ ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಮಕೃಷ್ಣ 6 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ತಿವ್ರತರನಾದ ಲೈಂಗಿಕ ಹಲ್ಲೆ ಎಸಗಿದ್ದನು. ಈತನ ವಿರುದ್ಧ ಕಲಂ-363,354 ಐ.ಪಿ.ಸಿ ಮತ್ತು ಕಲಂ-10 ಪೋಕ್ಸೋ ಕಾಯಿದೆ ಅಡಿ ಕಿಕ್ಕೇರಿ ಪೋಲೀಸ್ ಠಾಣಾ ಪೋಲಿಸ್ ಸಬ್ ಇನ್ ಸ್ಪೆಕ್ಟರ್ ಸಿದ್ದಲಿಂಗ ಬಾನಸಿ ತನಿಖೆಯನ್ನು ನಡೆಸಿದ್ದರು. ಪೊಲೀಸ್ ಇನ್ ಸ್ಪೆಕ್ಟರ್ ರೇವತಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ದಾಖಲಿಸಿದ್ದರು.
ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ವಿಚಾರಣೆ ನಡೆಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮಕೃಷ್ಣ ಕಲಂ-363, 354(ಎ) ಐ.ಪಿ.ಸಿ ಹಾಗೂ ಕಲಂ-10 ಪೋಕ್ಸೋ ಕಾಯಿದೆ ಪ್ರಕಾರ ರಾಮಕೃಷ್ಣ ಅಪರಾಧಿ ಎಂದು ತೀರ್ಪು ನೀಡಿದ್ದಾರೆ.
ಕಲಂ-363 ಐ.ಪಿ.ಸಿ.ಗೆ ಮೂರು ವರ್ಷಗಳ ಸಾದಾ ಸಜೆ ಮತ್ತು 1000 ರೂ ದಂಡ ಹಾಗೂ ಕಲಂ-354(ಎ) ಐ.ಪಿ.ಸಿ. ಕಲಂ-10 ರ ಪೋಕ್ಸೋ ಕಾಯಿದೆ ಅಪರಾಧಕ್ಕೆ ಐದು ವರ್ಷಗಳ ಕಠಿಣ ಸಜೆ ಮತ್ತು 5,000ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ 50,000 ರೂ ಪರಿಹಾರ ಪಾವತಿಸುವಂತೆ ತೀರ್ಪಿನಲ್ಲಿ ಆದೇಶ ಮಾಡಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಎಂ.ಜೆ ಪೂರ್ಣಿಮಾ ವಾದ ಮಂಡಿಸಿದ್ದರು.


