ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವೈಭವೋಪೇತ ವಿವಾಹ ಮಹೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪಾಲ್ಗೊಂಡರು.

ವಿವಾಹಮಹೋತ್ಸವದ ಭಾಗವಾಗಿ ಶನಿವಾರ ನಡೆದ ʻಶುಭ ಆಶೀರ್ವಾದʼ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗೆ ಆಶೀರ್ವದಿಸಿದರು.

ಎಸ್‌ಪಿಜಿ ಭದ್ರತೆಯೊಂದಿಗೆ ಮೋದಿ ಅವರು ಮುಂಬೈನ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ಗೆ ಆಗಮಿಸುತ್ತಲೇ ಮುಕೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ ಸ್ವಾಗತ ಕೋರಿದರು, ಬಳಿಕ ಮೋದಿ ಅವರ ಕಾಲಿಗೆ ನಮಸ್ಕರಿಸಿದರು. ಇದಾದ ಬಳಿಕ ಅಂಬಾನಿ ಕುಟುಂಬವನ್ನು ಭೇಟಿಯಾದ ಮೋದಿ, ಮುಕೇಶ್‌ ಅಂಬಾನಿ ಪಕ್ಕದಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಕೆಲಕಾಲ ಸಂಗೀತ ಆಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸುಮಾರು 29 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ ನೀಡಲು ಮುಂಬೈಗೆ ತೆರಳಿದ್ದರು. ಈ ವೇಳೆ ಅನಂತ್‌-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವ ಭಾಗವಾಗಿ ನಡೆದ ಶುಭ ಆಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಇತರ ಗಣ್ಯರನ್ನೂ ಮೋದಿ ಭೇಟಿಯಾದರು.

ಅನಂತ್-ರಾಧಿಕಾ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಬಿಹಾರದ ಮಾಜಿ ಡಿಸಿಎಂ ತೇಜಸ್ವಿ ಯಾದವ್, ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಮತ್ತು ಆರ್‌ಪಿಐ ನಾಯಕ ರಾಮದಾಸ್ ಅಠಾವಳೆ, ಮಾಜಿ ಸಿಎಂ ಉದ್ಧವ್ ಠಾಕ್ರೆ, ಎನ್‌ಸಿಪಿ ಹಿರಿಯ ನಾಯಕಿ ಸುಪ್ರಿಯಾ ಸುಳೆ ಸಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

By admin

Leave a Reply

Your email address will not be published. Required fields are marked *

Verified by MonsterInsights