ಹೊಸ ದಿಲ್ಲಿ: ಭಾರತೀಯ ಜನತಾ ಪಕ್ಷ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದರೆ ದೇಶದ ಸಂವಿಧಾನವನ್ನೇ ಬದಲಾವಣೆ ಮಾಡುತ್ತದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳಿಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ತಮ್ಮ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ ಎಂದರು.
ಕಳೆದ 10 ವರ್ಷಗಳಲ್ಲಿ ನೀವು ಕಂಡಿದ್ದು, ಊಟದ ವೇಳೆ ನೀಡುವ ‘ಸ್ಟಾರ್ಟರ್’ಗಳು ಇದ್ದಂತೆ. ನೀವು ಕೇವಲ ‘ಅಪ್ಪೆಟೈಝೆರ್’ಗಳ ರುಚಿ ನೋಡಿದ್ದೀರಿ. ‘ಮೇನ್ ಕೋರ್ಸ್’ ಇನ್ನೂ ಬಾಕಿ ಇದೆ. ನಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ ದೇಶದ ಜನತೆ ಆ ಲಾಭವನ್ನೂ ಪಡೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
2024ರ ಲೋಕಸಭಾ ಚುನಾವಣೆ ಬಳಿಕ ವಿರೋಧ ಪಕ್ಷಗಳು ಇವಿಎಂ ಮೇಲೆ ಆರೋಪ ಹೊರಿಸೋದನ್ನು ಕಡಿಮೆ ಮಾಡಿದ್ದಾರೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆ ರಾಮ್‌ಟೆಕ್ ಕ್ಷೇತ್ರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎಂದು ವಿರೋಧ ಪಕ್ಷಗಳು ವಾದಿಸಿದ್ದವು. ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಅವರು ಇದೇ ಮಾತು ಆಡುತ್ತಿದ್ದಾರೆ. ಈ ಮೂಲಕ ತಮ್ಮ ದಿವಾಳಿತನ ತೋರಿಸುತ್ತಿದ್ದಾರೆ. ಎಮರ್ಜೆನ್ಸಿ ಕಾಲದಲ್ಲಿ ಭಾರತದ ಪ್ರಜಾಪ್ರಭುತ್ವ ಆತಂಕದಲ್ಲಿ ಇರಲಿಲ್ಲವೇ? ಇದೀಗ ಬಡವರ ಮಗನಾದ ನಾನು ಪ್ರಧಾನಿ ಆದ ಮೇಲೆ ಪ್ರಜಾಪ್ರಭುತ್ವ ಆತಂಕದಲ್ಲಿದೆ ಎಂದು ಕಾಂಗ್ರೆಸ್ ಭಾವಿಸುತ್ತಿದೆ ಎಂದು ಪ್ರಧಾನಿ ಮೋದಿ ಹರಿಹಾಯ್ದರು.
ಹಾಗೆ ನೋಡಿದರೆ ದೇಶದ ಸಂವಿಧಾನವನ್ನು ಗೌರವಿಸಿದ್ದೇ ಬಿಜೆಪಿ ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ನೀವು ಸಂವಿಧಾನವನ್ನು ಗೌರವಿಸಿದ್ದರೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ ಆರ್ಟಿಕಲ್ 370 ಏಕೆ ರದ್ದು ಮಾಡಿರಲಿಲ್ಲ ಎಂದು ಪ್ರಶ್ನಿಸಿದರು. ಆರ್ಟಿಕಲ್ 370 ರದ್ದತಿ ಬಳಿಕ ಈ ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಮಹಿಳೆಯರಿಗೆ ಮೀಸಲಾತಿ ಸೇರಿದಂತೆ ಹಲವು ಹಕ್ಕುಗಳು ಸಿಕ್ಕವು. ಆರ್ಟಿಕಲ್ 370 ಇದ್ದ ಕಾರಣ ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಹಾಗೂ ಉಗ್ರವಾದ ನೆಲೆಸಿತ್ತು. ಇದಕ್ಕೆಲ್ಲಾ ಕಾಂಗ್ರೆಸ್ ಕಾರಣ ಎಂದ ಪ್ರಧಾನಿ ಮೋದಿ, ಸಂವಿಧಾನದ ಹೆಸರಲ್ಲಿ ದೇಶದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ಧಾರೆ ಎಂದು ಹರಿಹಾಯ್ದರು.
ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತಾಗಿಯೂ ಮಾತನಾಡಿದ ಪ್ರಧಾನಿ ಮೋದಿ, ಸಿಎಎ ಕಾಯ್ದೆ ಅತ್ಯಂತ ಮಹತ್ವದ್ದು ಎಂದರು. ಈ ದೇಶದ ದಲಿತರಿಗೆ ಈ ಕಾಯ್ದೆಯಿಂದ ನೆರವಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಬೌದ್ಧ ಧರ್ಮೀಯರು ಭಾರತದ ಪೌರತ್ವ ಪಡೆಯಲು ಈ ಕಾಯ್ದೆ ನೆರವಾಗಿದೆ. ವಿರೋಧ ಪಕ್ಷವಾದ ಕಾಂಗ್ರೆಸ್ ಸಿಎಎ ಕಾಯ್ದೆ ಕುರಿತಾಗಿ ಎಷ್ಟೇ ವಿರೋಧ ಮಾಡಿದ್ದರೂ ನಾವು ನೆರೆಯ ದೇಶಗಳಿಂದ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com