ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ನರಮೇಧ, ಇಡೀ ವಿಶ್ವದಲ್ಲೇ ತಲ್ಲಣ ಮೂಡಿಸಿದೆ. ಭಯೋತ್ಪಾದಕರ ದಾಳಿ ಸುದ್ದಿ ಗೊತ್ತಾಗುತ್ತಿದ್ದಂತೆ, ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ, ಪ್ರಧಾನಿ ಮೋದಿ ವಾಪಸ್ ಆಗಿದ್ದಾರೆ.
ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಅಲ್ಲೇ ಉನ್ನತ ಮಟ್ಟದ ತುರ್ತು ಸಭೆ ನಡೆಸಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಸಭೆಯಲ್ಲಿ ಭಾಗಿಯಾಗಿದ್ರು. ಈ ವೇಳೆ ಪಹಲ್ಗಾಮ್ನಲ್ಲಿ ಏನಾಯ್ತು? ಭಯೋತ್ಪಾದಕರ ದಾಳಿ ಹೇಗಾಯ್ತು? ದಾಳಿಯಲ್ಲಾದ ಸಾವು-ನೋವಿನ ಸಂಪೂರ್ಣ ಮಾಹಿತಿಯನ್ನು, ಪ್ರಧಾನಿ ಮೋದಿ ಅವರಿಗೆ ವಿವರಿಸಲಾಗಿದೆ. ಜೊತೆಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ಮತ್ತೊಂದು ಪ್ರಮುಖ ವಿಷಯ ಅಂದ್ರೆ, ಸೌದಿ ಅರೇಬಿಯಾಕ್ಕೆ ಹೋಗುವಾಗ ಪ್ರಧಾನಮಂತ್ರಿ ಮೋದಿ ಅವರಿದ್ದ ವಿಮಾನ ಪಾಕಿಸ್ತಾನದ ವಾಯು ಪ್ರದೇಶ ಬಳಸಿತ್ತು. ಅದರೆ ವಾಪಸ್ ಆಗುವಾಗ ಮುಂಜಾಗ್ರತಾ ಕ್ರಮವಾಗಿ ಪರ್ಯಾಯ ಮಾರ್ಗ ಬಳಸಲಾಗಿದೆ. ಪಾಕಿಸ್ತಾನದಿಂದ ಅಪಾಯ ಎದುರಾಗಬಹುದು ಎಂಬ ಕಾರಣಕ್ಕೆ ಅರಬ್ಬಿ ಸಮುದ್ರ, ಗುಜರಾತ್ ಮೂಲಕ ಏರ್ ಫೋರ್ಸ್ ಬೋಯಿಂಗ್ 777-300 ವಿಮಾನ, ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.