ಬೆಂಗಳೂರು: ರಾಜಧಾನಿಯ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ವಿಕೃತ ಮನಸ್ಥಿತಿಯ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಅಮಲ್ (23) ಎಂಬಾತ ಬಂಧಿತ ಆರೋಪಿ.
ಬಂಧಿತ ಆರೋಪಿ ಅಮಲ್ ಹೆಬ್ಬಗೋಡಿಯ ವಿದ್ಯಾನಗರದಲ್ಲಿ ವಾಸವಾಗಿದ್ದ. ಈತ ಮನೆಗಳ ಮುಂದೆ ಸುತ್ತಾಡಿ, ಎಲ್ಲೆಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಒಣಹಾಕಲಾಗಿದೆ ಎಂಬುದನ್ನು ದೂರದಿಂದಲೇ ಗಮನಿಸುತ್ತಿದ್ದ. ಮನೆಯವರು ಇಲ್ಲದ ಸಮಯ ಅಥವಾ ರಾತ್ರಿ ವೇಳೆ ಗುಟ್ಟಾಗಿ ನುಗ್ಗಿ ಒಳ ಉಡುಪುಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೇವಲ ಕಳ್ಳತನ ಮಾಡುವುದಷ್ಟೇ ಅಲ್ಲದೆ, ಈತ ತೋರಿಸುತ್ತಿದ್ದ ವಿಕೃತಿ ಪೊಲೀಸರನ್ನೇ ದಂಗುಬಡಿಸಿದೆ. ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿಕೊಂಡು ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ಈತ, ಆ ಮೂಲಕ ವಿಕೃತ ಆನಂದ ಅನುಭವಿಸುತ್ತಿದ್ದ. ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಅಂತಹ ಹತ್ತಾರು ಆಕ್ಷೇಪಾರ್ಹ ಫೋಟೋಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ.
ಬಡಾವಣೆಯಲ್ಲಿ ಪದೇ ಪದೇ ಮಹಿಳೆಯರ ಬಟ್ಟೆಗಳು ನಾಪತ್ತೆಯಾಗುತ್ತಿದ್ದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ನಿಗಾ ಇಟ್ಟಿದ್ದ ಹೆಬ್ಬಗೋಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಈತ ವಾಸವಿದ್ದ ಮನೆಯಲ್ಲಿ ರಾಶಿ ರಾಶಿ ಮಹಿಳೆಯರ ಒಳ ಉಡುಪುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಸದ್ಯ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


