ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಕಿಚ್ಚ ಸುದೀಪ್ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್ 25) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಮಾಸ್ ಅವತಾರದಲ್ಲಿ ಸುದೀಪ್ ಅವರು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಈ ಚಿತ್ರದಲ್ಲಿನ ಆ್ಯಕ್ಷನ್ ಸೀನ್ಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ‘ಮ್ಯಾಕ್ಸ್’ ಹೌಸ್ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.
‘ಮ್ಯಾಕ್ಸ್’ ಸಿನಿಮಾದಿಂದ ಜನರಿಗೆ ಮುಖ್ಯವಾಗಿ ಸಿಗುವುದು ಆ್ಯಕ್ಷನ್. ಹೊಡಿಬಡಿ ದೃಶ್ಯಗಳಿಗೆ ಈ ಸಿನಿಮಾದಲ್ಲಿ ಯಾವುದೇ ಕೊರತೆ ಇಲ್ಲ. ಸುದೀಪ್ ಅವರನ್ನು ಬಹಳ ದಿನಗಳ ಬಳಿಕ ಇಷ್ಟೊಂದು ಮಾಸ್ ಗೆಟಪ್ನಲ್ಲಿ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಸುದೀಪ್ ಅವರ ಅಭಿನಯಕ್ಕೆ ಮೆಚ್ಚುಗೆ ಕೇಳಿಬರುತ್ತಿದೆ.
ಈ ಸಿನಿಮಾ ನೋಡುವಾಗ ಕಿಂಚಿತ್ತೂ ಬೋರ್ ಆಗಲ್ಲ ಎಂದು ಸುದೀಪ್ ಅಭಿಮಾನಿಗಳು ಹೇಳಿದ್ದಾರೆ. ಕತೆ ತುಂಬ ವೇಗವಾಗಿ ಸಾಗುವುದರಿಂದ ಜನರಿಗೆ ಇಷ್ಟ ಆಗುತ್ತಿದೆ. ಇದು ಸುದೀಪ್ ಅವರ ಒನ್ ಮ್ಯಾನ್ ಶೋ ಕೂಡ ಹೌದು. ಪಕ್ಕಾ ಅಭಿಮಾನಿಗಳಿಗಾಗಿ ‘ಮ್ಯಾಕ್ಸ್’ ಮೂಡಿಬಂದಿದೆ. ಸೂಪರ್ ಹಿಟ್ ಆಗಲಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.
ಚಿತ್ರಮಂದಿರದಲ್ಲಿ ‘ಮ್ಯಾಕ್ಸಿಮಮ್ ಮಾಸ್..’ ಹಾಡು ಬಂದಾಗ ಜನರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸೆಲೆಬ್ರೇಷನ್ ಜೋರಾಗಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಸಿನಿಮಾಗೆ ಪಾಸಿಟಿವ್ ವಿಮರ್ಶೆ ನೀಡುತ್ತಿದ್ದಾರೆ.


