ನವದೆಹಲಿ/ಮಂಡ್ಯ: ಕನ್ನಡ ನಾಡಿನ ಜ್ಞಾನ ದಾಸೋಹಿ, ಲಕ್ಷಾಂತರ ಪುಸ್ತಕಗಳ ಸಂಗ್ರಹದ ಮೂಲಕ ಅಕ್ಷರ ಲೋಕವನ್ನೇ ಸೃಷ್ಟಿಸಿರುವ ಮಂಡ್ಯ ಜಿಲ್ಲೆಯ ಅಂಕೇಗೌಡ ಅವರಿಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿರುವ ಅದ್ವಿತೀಯ ಸಾಧನೆಯನ್ನು ಪರಿಗಣಿಸಿ 2026ನೇ ಸಾಲಿನ ಈ ಅತ್ಯುನ್ನತ ನಾಗರಿಕ ಗೌರವವನ್ನು ನೀಡಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರು, ಹರಳಹಳ್ಳಿಯಲ್ಲಿ ನಿರ್ಮಿಸಿರುವ ‘ಪುಸ್ತಕದ ಮನೆ’ ಇಂದು ವಿಶ್ವದ ಗಮನ ಸೆಳೆದಿದೆ. ಅಂಕೇಗೌಡರ ಈ ಪುಸ್ತಕ ಪ್ರೇಮದ ಹಿಂದೆ ಒಂದು ನೋವಿನ ಕಥೆಯಿದೆ. ಶಾಲಾ ದಿನಗಳಲ್ಲಿ ಓದಲು ಪುಸ್ತಕ ಕೇಳಿದಾಗ ಗ್ರಂಥಾಲಯದ ಶಿಕ್ಷಕರು ಪುಸ್ತಕ ನೀಡಲು ನಿರಾಕರಿಸಿದ್ದರು. ಆ ಒಂದು ಮಾತು ಅಂಕೇಗೌಡರ ಮನಸ್ಸಿನಲ್ಲಿ ತೀವ್ರವಾಗಿ ನಾಟಿತು. ಅಂದೇ ನಿರ್ಧರಿಸಿದ ಅವರು, ತಾನೇ ಪುಸ್ತಕಗಳನ್ನು ಕೊಂಡು ಸಂಗ್ರಹಿಸಲು ಆರಂಭಿಸಿದರು. ಇಂದು ಅದೇ ಛಲ ಏಷ್ಯಾದಲ್ಲೇ ದೊಡ್ಡ ಖಾಸಗಿ ಗ್ರಂಥಾಲಯ ನಿರ್ಮಾಣಕ್ಕೆ ಕಾರಣವಾಗಿದೆ.
ಸಕ್ಕರೆ ಕಾರ್ಖಾನೆಯೊಂದರಲ್ಲಿ ಟೈಮ್ ಕೀಪರ್ ಆಗಿ ಕೆಲಸ ಮಾಡುತ್ತಲೇ ತಮ್ಮ ಆದಾಯದ ಬಹುಪಾಲು ಹಣವನ್ನು ಅಂಕೇಗೌಡರು ಪುಸ್ತಕಗಳಿಗಾಗಿಯೇ ವ್ಯಯಿಸಿದ್ದಾರೆ. ಇವರ ಈ ಸಾಧನೆಯಲ್ಲಿ ಅವರ ಪತ್ನಿಯ ಸಹಕಾರ ಅಪಾರ. ಪುಸ್ತಕಗಳನ್ನು ಜೋಡಿಸುವುದು ಮತ್ತು ಅದರ ನಿರ್ವಹಣೆಯಲ್ಲಿ ಪತ್ನಿ ಬೆನ್ನೆಲುಬಾಗಿ ನಿಂತಿದ್ದಾರೆ.
ಈ ‘ಪುಸ್ತಕದ ಮನೆ’ ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ. ಉದ್ಯಮಿ ಹರಿಕೋಡೆ ಅವರು ಈ ಜ್ಞಾನ ದೇಗುಲಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡುವ ಮೂಲಕ ಬೆಂಬಲ ನೀಡಿದ್ದಾರೆ. ಇನ್ನು ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ದೊಡ್ಡದು ಎಂದು ಸಾರಿ ಹೇಳುತ್ತಿರುವ ಅಂಕೇಗೌಡರು ಇಂದು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವುದು ಇಡೀ ಮಂಡ್ಯ ಜಿಲ್ಲೆ ಹಾಗೂ ಕನ್ನಡ ಸಾರಸ್ವತ ಲೋಕಕ್ಕೆ ಹೆಮ್ಮೆಯ ವಿಷಯವಾಗಿದೆ.


