ಹುಬ್ಬಳ್ಳಿ: ಕೆಎಸ್‌ಸಿಎ ಹುಬ್ಬಳ್ಳಿ ಕ್ರಿಕೆಟ್ ಮೈದಾನದಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ್ ನಡುವೆ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಎಡವಿದ್ದು, ಚೊಚ್ಚಲ ರಣಜಿ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಜಮ್ಮು-ಕಾಶ್ಮೀರ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ದೇಶಿ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯ ಬರೆದಿದೆ. ಫೈನಲ್ ಪ್ರವೇಶ ಪಡೆದುಕೊಂಡಿದ್ದ ಮೊದಲ ಪ್ರಯತ್ನದಲ್ಲೇ ದೇಶಿ ಟ್ರೋಫಿಗೆ ಮುತ್ತಿಕ್ಕಿದೆ.
ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ನೈಪುಣ್ಯತೆ ಮೆರೆದ ಜಮ್ಮು-ಕಾಶ್ಮೀರ್‌ತಂಡ ಕರ್ನಾಟಕದ ಮೇಲೆ ಆರಂಭದಿಂದಲೂ ಬಿಗಿ ಹಿಡಿತ ಸಾಧಿಸಿತು. ಇದರ ಪರಿಣಾಮವಾಗಿ ರಣಜಿ ಇತಿಹಾಸದಲ್ಲಿ ಚೊಚ್ಚಲ ಟ್ರೋಫಿ ಗೆದ್ದಿದೆ.ಕರ್ನಾಟಕ ತಂಡದಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್, ಪ್ರಸಿದ್ದ್ ಕೃಷ್ಣ, ಶ್ರೇಯಸ್ ಗೋಪಾಲ್ ರಂತಹ ಆಟಗಾರರಿದ್ದರು. ಅದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸಿ ಜೆಕೆ ಗೆಲುವಿನ ನಗೆ ಬೀರಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಕರ್ನಾಟಕ 293 ರನ್‌ಗಳಿಗೆ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ 160 ರನ್ ಗಳಿಸಿದರು. ಜಮ್ಮು ಮತ್ತು ಕಾಶ್ಮೀರ ತಂಡದ ವೇಗದ ಬೌಲರ್ ಆಕಿಬ್ ನಬಿ ಅವರ ಚುರುಕಾದ ಬೌಲಿಂಗ್‌ನಿಂದ ಕರ್ನಾಟಕದ ಅಗ್ರ ಬ್ಯಾಟಿಂಗ್ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿತು. ಎರಡನೇ ಇನ್ನಿಂಗ್ಸ್‌ನಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಮ್ಮು-ಕಾಶ್ಮೀರ್ ತಂಡ 4 ವಿಕೆಟ್ ನಷ್ಟಕ್ಕೆ 342 ರನ್‌ಗಳಿಕೆ ಮಾಡಿತು. ಈ ಮೂಲಕ ಬರೋಬ್ಬರಿ 633 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಿತು.
ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಜಮ್ಮು-ಕಾಶ್ಮೀರ್‌ಬರೋಬ್ಬರಿ 67 ವರ್ಷಗಳ ನಂತರ ಪ್ರಶಸ್ತಿ ಗೆದ್ದಿದೆ. ಇಲ್ಲಿಯವರೆಗೂ ಒಂದೇ ಒಂದು ಪ್ರಶಸ್ತಿ ಗೆಲ್ಲಲ್ಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಬಲಿಷ್ಠ ಕರ್ನಾಟಕ ತಂಡ ಮಣಿಸಿ ಐತಿಹಾಸಿಕ ಪ್ರಶಸ್ತಿಗೆ ಕೊರಳೊಡ್ಡಿದೆ. ಈ ಮೂಲಕ ರಣಜಿಯಲ್ಲಿ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಹುಬ್ಬಳ್ಳಿಗೆ ಆಗಮಿಸಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಆಟಗಾರರನ್ನು ಭೇಟಿಯಾಗಿ ಅಭಿನಂದಿಸಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ಸಹ ವಿಶೇಷವಾಗಿತ್ತು.


