ಬೆಂಗಳೂರು: ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಅವರು 90 ರ ದಶಕದ ಬೆಂಗಳೂರು ನಗರದ ವಾತಾವರಣದಲ್ಲಿ ಜನರ ಜೀವನ ಶೈಲಿಯನ್ನು ನೆನಪಿಸಿಕೊಂಡು ಟ್ವೀಟರ್ ನಲ್ಲಿ ಪೋಸ್ಟ್ ಮಾಡುವುದರ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಐಎಎಸ್ ಪ್ರೊಬೇಷನರಿಗಾಗಿ ಬೆಂಗಳೂರಿನಲ್ಲಿದ್ದ ಅವರ ದಿನನಿತ್ಯದ ಲೈಫ್ ಸ್ಟೈಲ್ ಹೇಗಿತ್ತು ಎಂಬುದನ್ನು ನೆನಪಿನ ಮೆಲುಕು ಹಾಕಿದ್ದಾರೆ. ಅಷ್ಟಕ್ಕೂ ಈಗ ಯಾಕೆ ಈ ವಿಷಯ ಪ್ರಸ್ತಾಪಿಸಿದರು ಅಂದ್ರೆ, 90 ರ ದಶಕದಲ್ಲಿ ಬೆಂಗಳೂರು ನಗರದ ಸಂಚಾರ ಹಾಗೂ ನಗರ ಪ್ರದಕ್ಷಣೆಯ ವಿಡಿಯೋ ಒಂದನ್ನು ಟ್ವೀಟರ್ ನಲ್ಲೊಬ್ಬರು ಶೇರ್ ಮಾಡಿದ್ದರು. ಈ ವಿಡಿಯೋ ರೀಟ್ವೀಟ್ ಮಾಡಿದ ಮಣಿವಣ್ಣನ್, ತಮ್ಮ ಹಳೇ ನೆನಪುಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಒಟ್ಟಾರೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಹೀಗಿದೆ..

ನಾನು ಇನ್ಫೆಂಟ್ರಿ ರಸ್ತೆಯ ನಂ 1 ರ ಐಎಎಸ್ ಅಸೋಸಿಯೇಷನ್ನಲ್ಲಿ ಪ್ರೊಬೇಷನರಿ ಆಗಿದ್ದೆ. ಒಂದು ಪ್ಲೇಟ್ ಇಡ್ಲಿ/ದೋಸೆಗಾಗಿ ಸಮೀಪದಲ್ಲಿದ್ದ ಹೋಟೆಲ್ ʼನಿಸರ್ಗʼ ಕ್ಕೆ ನಡೆದುಕೊಂಡು ಹೋಗುತ್ತಿದ್ದೆ. ನಂತರ ʼಕಾಫಿ ಬೋರ್ಡ್ʼ ಬಳಿ ಬಲ ತಿರುವು ತೆಗೆದುಕೊಂಡು ವಿಧಾನಸೌಧಕ್ಕೆ ಹೋಗುತ್ತಿದ್ದೆ.
ಆಗ, ವಿಧಾನಸೌಧಕ್ಕೆ ಯಾವುದೇ ಬೇಲಿ ಇರಲಿಲ್ಲ. ದ್ವಾರಗಳೂ ಇಲ್ಲ. ಯಾರೂ ನಿಮ್ಮನ್ನು ತಡೆಯುತ್ತಿರಲಿಲ್ಲ. ಜನರು ವಿಧಾನಸೌಧದ ಪೋರ್ಟಿಕೋ ವರೆಗೆ ಮುಕ್ತವಾಗಿ ಸಾಗಬಹುದಿತ್ತು.
ಮಧ್ಯಾಹ್ನದ ಊಟ ಕನ್ನಿಂಗ್ ಹ್ಯಾಮ್ ರಸ್ತೆಯ ಹೋಟೆಲ್ ʼ ಚಂದ್ರಿಕಾʼ ದಲ್ಲಿ ಮಾಡುತ್ತಿದ್ದೆ. ನಂತರ ಮತ್ತೆ ಸಮೀಪದಲ್ಲೇ ಇರುವ ಐಎಎಸ್ ಸಂಘಕ್ಕೆ ಹಿಂತಿರುಗುತ್ತಿದ್ದೆ.
ಆಗ, ವಾಹನ ಮತ್ತು ಜನಗಳ ಸಂಚಾರ ತುಂಬಾ ಕಡಿಮೆ ಇತ್ತು. ರಸ್ತೆಗಳನ್ನು ದಾಟಲು ಎಲ್ಲಿಯೂ ನಿಂತ ನೆನಪಿಲ್ಲ. ಹೆಚ್ಚಾಗಿ ಸ್ಕೂಟರ್ ಗಳು ಸಂಚರಿಸುತ್ತಿದ್ದವು. ಜತೆಗೆ ಕೆಲವು ಅಂಬಾಸಿಡರ್ ಮತ್ತು ಓಮ್ನಿ ಕಾರುಗಳು ಸಂಚರಿಸುತ್ತಿದ್ದವು.
ಸುತ್ತಲೂ ಶುದ್ಧ ಗಾಳಿ ಮತ್ತು ಮರಗಳು. ತುಂಬಾ ಕಡಿಮೆ ಶಬ್ದ, ಆರಾಮವಾಗಿ ಸಂಭಾಷಿಸುತ್ತ ನಡೆಯುವಂತ ವಾತಾವರಣ ಆಗಿತ್ತು. ಅದುವೆ “ ಸ್ವರ್ಗ.” ಅದು 1999ರಲ್ಲಿ ಬೆಂಗಳೂರು.


