ಅಮೆರಿಕ ಅಧ್ಯಕ್ಷೀಯ ಚುನಾವಣೆ ನ.5 ರಂದು ಮತದಾನ ನಡೆಯಲಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಅಭ್ಯರ್ಥಿಗಳಿಬ್ಬರು ಕೊನೆ ಹಂತದ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಮತದಾನ ಪ್ರಕ್ರಿಯೆ ಆರಂಭವಾಗುವುದಕ್ಕೂ 50 ಗಂಟೆಗಳ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದ ಕಾರಣ, ಉಭಯ ನಾಯಕರು ಮತದಾರರ ಮನ ಓಲೈಕೆಗಾಗಿ ಅಂತಿಮ ಕ್ಷಣದ ಕಸರತ್ತಿಗೆ ಮೊರೆ ಹೋಗಿದ್ದರು. ಪರಸ್ಪರರ ವಿರುದ್ಧ ಟೀಕಾ ಪ್ರಹಾರವನ್ನೂ ಹೂಡಿದರು . ವಿಸ್ಕನ್‌ಸಿನ್‌ನಲ್ಲಿ ನಡೆದ ಭಾರಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ‘ಈ ಬಾರಿ ನಮ್ಮದೇ ಗೆಲುವು’ ಎಂದಾಗ ಬೆಂಬಲಿಗರಿಂದ ಭಾರಿ ಚಪ್ಪಾಳೆ ಕೇಳಿ ಬಂತು.
ಕಮಲಾ ಹ್ಯಾರಿಸ್ ಅವರು ಶನಿವಾರ ವಿಸ್ಕನ್‌ಸಿನ್, ನಾರ್ತ್ ಕೆರೋಲಿನಾ ಹಾಗೂ ‘ರಸ್ಟ್ ಬೆಲ್ಟ್’ನಲ್ಲಿ ಪ್ರಚಾರ ನಡೆಸಿ, ಮತದಾರರ ಮನ ಗೆಲ್ಲಲು ಕಸರತ್ತು ನಡೆಸಿದರು. ಮಿಚಿಗನ್, ಜಾರ್ಜಿಯಾ ಹಾಗೂ ಪೆನ್ವಿಲ್ವೇನಿಯಾದಲ್ಲಿ ಮತ ಯಾಚಿಸಿದರು. ಡೆಟ್ರಾಯಿಟ್ ನಂತರ, ಮಿಚಿಗನ್ ಸ್ಟೇಟ್ ಯುನಿವರ್ಸಿಟಿಯಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿದರು. ಅಮೆರಿಕದ ಈಶಾನ್ಯ ಮತ್ತು ಪಶ್ಚಿಮದ ಕೇಂದ್ರ ಭಾಗದ ರಾಜ್ಯಗಳನ್ನು ಒಳಗೊಂಡ ಪ್ರದೇಶವನ್ನು ‘ರಸ್ಟ್ ಬೆಲ್ಟ್’ ಎಂದು ಕರೆಯಲಾಗುತ್ತದೆ. ಈ ಮೊದಲು ಈ ಭಾಗದಲ್ಲಿ ಉಕ್ಕು ಕಾರ್ಖಾನೆಗಳು ಸೇರಿದಂತೆ ಭಾರಿ ಪ್ರಮಾಣದ ಕೈಗಾರಿಕೆಗಳಿದ್ದವು. ಈಗ, ಈ ಪ್ರದೇಶದಲ್ಲಿ ಕೈಗಾರಿಕೆಗಳ ಸಂಖ್ಯೆ ಕಡಿಮೆಯಾಗಿವೆಯಲ್ಲದೇ, ಜನಸಂಖ್ಯೆಯೂ ಕ್ಷೀಣಿಸಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯೂ ಆಗಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವರ್ಜಿನಿಯಾದಲ್ಲಿ ಶನಿವಾರ ಪ್ರಚಾರ ನಡೆಸಿದ್ದು, ಮುಂದಿನ ದಿನಗಳಲ್ಲಿ ಪೆನ್ಸಿಲ್ವೇನಿಯಾ, ನಾರ್ತ್ ಕೆರೋಲಿನಾ ಹಾಗೂ ಜಾರ್ಜಿಯಾ ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ. 78 ವರ್ಷದ ಡೊನಾಲ್ಡ್ ಟ್ರಂಪ್ ಸಹ ಮತದಾರರ ಓಲೈಕೆಗೆ ಬಿರುಸಿನ ಪ್ರಚಾರ ನಡೆಸಿದರು. ಸ್ಪೇನ್ ಮೂಲದ ಜನರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಟ್ರಂಪ್ ಅವರು ಭಾನುವಾರ ಪ್ರಚಾರ ಕೈಗೊಂಡಿದ್ದು ಗಮನಾರ್ಹ. ಅವರು ಉತ್ತರದ ರಾಜ್ಯಗಳಲ್ಲಿ ಕೂಡ ಪ್ರಚಾರ ಕೈಗೊಳ್ಳಲಿಲ್ಲ.