ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಂತೆ ಜನರಿಗೆ ಎಷ್ಟೇ ಜಾಗೃತಿ, ಎಚ್ಚರಿಕೆ ನೀಡಿದರೂ ಎಲ್ಲೆಂದರಲ್ಲಿ ಕಸ ಎಸೆಯುವ ಚಾಳಿ ಬಿಟ್ಟಿಲ್ಲ. ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಮೂಕ ಪ್ರಾಣಿಗಳೂ ಸಂಕಷ್ಟಕ್ಕೆ ಸಿಲುಕುತ್ತವೆ. ಹೌದು ಆಹಾರವನ್ನು ಅರಸಿ ಬರುವ ಪ್ರಾಣಿಗಳು ಅಲ್ಲಲ್ಲಿ ಎಸೆದಂತಹ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾದ ಅದೆಷ್ಟೋ ಘಟನೆಗಳು ನಡೆದಿವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಆಹಾರವೆಂದು ಭಾವಿಸಿ ನಾಗರ ಹಾವೊಂದು ಯಾರೋ ಬೀದಿಯಲ್ಲಿ ಎಸೆದಂತಹತ ಸಿರಪ್ ಬಾಟಲಿಯನ್ನು ನುಂಗಿ ಪರದಾಟಕ್ಕೆ ಸಿಲುಕಿದೆ. ತಕ್ಷಣ ಸ್ನೇಕ್ ಹೆಲ್ಪ್ ಲೈನ್ ಸಿಬ್ಬಂದಿ ಹಾವಿನ ಬಾಯಲ್ಲಿ ಸಿಕ್ಕಿಹಾಕಿಕೊಂಡ ಬಾಟಲಿಯನ್ನು ಹೊರ ತೆಗೆದಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಒಡಿಶಾದ ಭುವನೇಶ್ವರದಲ್ಲಿ ಈ ಘಟನೆ ನಡೆದಿದ್ದು, ನಾಗರ ಹಾವೊಂದು ಸಿರಪ್ ಬಾಟಲಿಯನ್ನು ನುಂಗಿ, ಉಸಿರಾಡುವುದಕ್ಕೂ ಆಗದೆ ಪ್ರಾಣ ಸಂಕಟದಲ್ಲಿ ಸಿಲುಕಿದೆ. ನಂತರ ಸ್ನೇಕ್ ಹೆಲ್ಪ್‌ಲೈನ್ ಸಿಬ್ಬಂದಿಯೊಬ್ಬರು ಹಾವಿನ ಗಂಟಲಲ್ಲಿ ಸಿಲುಕಿದ ಬಾಟಲಿಯನ್ನು ಯಶಸ್ವಿಯಾಗಿ ಹೊರ ತೆಗೆಯುವ ಮೂಲಕ ಮುಗ್ಧ ಜೀವವನ್ನು ರಕ್ಷಿಸಿದ್ದಾರೆ.
ಭಾರತೀಯ ಅರಣ್ಯಾಧಿಕಾರಿ ಸುಸಾಂತ ನಂದಾ ಈ ಕುರಿತ ಪೋಸ್ಟ್ ಒಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸ್ನೇಕ್ ಹೆಲ್ಪ್‌ಲೈನ್ ಸಿಬ್ಬಂದಿ ನಾಗರ ಹಾವಿನ ಗಂಟಲಲ್ಲಿ ಸಿಲುಕಿದ ಕೆಮ್ಮಿನ ಸಿರಪ್ ಬಾಟಲಿಯನ್ನು ಹೊರ ತೆಗೆಯುವ ಮೂಲಕ ಅಮೂಲ್ಯ ಜೀವವನ್ನು ರಕ್ಷಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ (ಎಕ್ಸ್ ಖಾತೆ )
ವೈರಲ್ ವಿಡಿಯೋದಲ್ಲಿ ಸಿರಪ್ ಬಾಟಲಿಯನ್ನು ನುಂಗಿದ ಹಾವೊಂದು ಈ ಸಂಕಷ್ಟದಿಂದ ಹೊರ ಬರಲಾರದೆ ಪರದಾಡುತ್ತಿರುವ ಮನಕಲಕುವ ದೃಶ್ಯವನ್ನು ಕಾಣಬಹುದು. ನಂತರ ಸ್ನೇಕ್ ಹೆಲ್ಪ್‌ಲೈನ್ ಸಿಬ್ಬಂದಿ ನಿಧಾನಕ್ಕೆ ಹಾವಿನ ಬಾಯಲ್ಲಿ ಸಿಲುಕ್ಕಿದ್ದಂತಹ ಬಾಟಲಿಯನ್ನು ನಿಧಾನಕ್ಕೆ ಹೊರ ತೆಗೆದಿದ್ದಾರೆ.
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಜನರು ಬೇಜವಾಬ್ದಾರಿಯಿಂದ ಎಲ್ಲೆಂದರಲ್ಲಿ ಕಸ ಎಸೆದು ಮೂಕ ಪ್ರಾಣಿಗಳ ಪ್ರಾಣಕ್ಕೆ ಕಂಟಕ ತಂದೊಡ್ಡುತ್ತಿದ್ದಾರೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com