ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕೆರೆ, ರಾಜಕಾಲುವೆ ಹಾಗೂ ಸೈಡ್ ಡ್ರೈನ್ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹದೇವಪುರ ವಲಯದಲ್ಲಿ “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದಡಿ ಇಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ವೆಂಗಯ್ಯನ ಕೆರೆಯಲ್ಲಿ ಒತ್ತುವರಿ ಭಾಗವನ್ನು ಗುರುತಿಸಿ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್ ಪುರಂ ವ್ಯಾಪ್ತಿಯ ವೆಂಗಯ್ಯನ ಕೆರೆಯನ್ನು 8 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾರ್ಯ, ಕೆರೆಯ ಸುತ್ತಲೂ ಫೆನ್ಸಿಂಗ್ ಅಳವಡಿಸುವ, ಬಂಡ್ ಬಲಪಡಿಸುವ, ವಾಯು ವಿಹಾರ ಮಾರ್ಗ, ಇನ್ ಲೆಟ್ ದುರಸ್ತಿ ಕಾರ್ಯ, ಡೈವರ್ಷನ್ ಲೈನ್ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆರೆಗೆ ಸೀವೇಜ್ ನೀರು ಬರದಂತೆ ಪಾಲಿಕೆ ವತಿಯಿಂದ 15 ಎಂ.ಎಲ್.ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಘಟಕ ಸ್ಥಾಪಿಸಲಾಗುತ್ತಿದ್ದು, ಜಲಮಂಡಳಿ ವತಿಯಿಂದ ಈಗಾಗಲೇ 10 ಎಂ.ಎಲ್.ಡಿ ಸ್ಥಾಪಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ:
ಸಕ್ರಾ ಆಸ್ಪತ್ರೆ ರಸ್ತೆಯಲ್ಲಿ ಮಳೆಗಾಲದ ವೇಳೆ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ, 750 ಮೀಟರ್ ರಸ್ತೆಯಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದರಂತೆ ರಸ್ತೆ ಭಾಗದಲ್ಲಿ ಹಾದುಹೋಗುವ ರಾಜಕಾಲುವೆಯ ಎರಡೂ ಬದಿಯ ಸುಮಾರು 120 ಮೀಟರ್ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ ಉಳಿದ ಕಡೆ ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ರಸ್ತೆ ದುರಸ್ತಿ ಕಾರ್ಯವನ್ನು ನಿಗದಿತ ಸಮಯದೊಳಗಾಗಿ ಪೂರ್ಣಗೊಳಿಸಬೇಕು. ಜೊತೆಗೆ ಇಕೋ ಸ್ಪೇಸ್ ಕಡೆಯಿಂದ ಬರುವ ಕಾಲುವೆ ಹಾಗೂ ಸಕ್ರಾ ಆಸ್ಪತ್ರೆ ಕಡೆಯಿಂದ ಬರುವ ಕಾಲುವೆ ಒತ್ತುವರಿಯಾಗಿದ್ದಲ್ಲಿ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ವೀಸ್ ರಸ್ತೆ ದುರಸ್ಥಿ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ:
ಹೊರ ವರ್ತುಲ ರಸ್ತೆ ಮಾರತಹಳ್ಳಿ ಬಳಿಯ ಸರ್ವೀಸ್ ರಸ್ತೆಯಲ್ಲಿ ಪಾದಚಾರಿ ಮಾರ್ಗ ಹಾಗೂ ಮೀಡಿಯನ್ ಡ್ರೈನ್ ಕಾಮಗಾರಿಯನ್ನು ಪರಿಶೀಲಿಸಿ, ಸೈಡ್ ಡ್ರೈನ್ ನಲ್ಲಿ ಹೂಳೆತ್ತಿ, ಹೊಸದಾಗಿ ಸ್ಲ್ಯಾಬ್ ಹಳವಡಿಸಿ, ಗ್ರೇಟಿಂಗ್ಸ್ ಅಳವಡಿಸಿ ರಸ್ತೆ ಮೇಲೆ ಬೀಳುವ ನೀರು ಸೈಡ್ ಡ್ರೈನ್ ಗೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಬಾಕಿಯಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಮೇಲೆ ಕ್ರಮವಹಿಸಿ:
ವೈಟ್ ಫೀಲ್ಡ್ ಉಪ ವಿಭಾಗ ಸಹಾಯಕ ಕಂದಯ ಅಧಿಕಾರಿ ಕಛೇರಿಗೆ ಭೇಟಿ ನೀಡಿ, ನಾಗರೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯ ಕೇಂದ್ರ, ಮಾಹಿತಿಯ ನಾಮಫಲಕ ಅಳವಡಿಸಬೇಕು. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ಮೇಲೆ ಕ್ರಮವಹಿಸಲು ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಕಲ್ವರ್ಟ್ ಡ್ರೈನ್ ಪರಿಶೀಲನೆ:
ಐಟಿಪಿಎಲ್ ರಸ್ತೆ ಝೂರಿ ಹೋಟೆಲ್ ಬಳಿ ಕಲ್ವರ್ಟ್ ಡ್ರೈನ್ ಪರಿಶೀಲನೆ ನಡೆಸಿ ಕಾಲುವೆಯಲ್ಲಿ ಹೂಳೆತ್ತಿ ಸ್ವಚ್ಛತೆ ಕಾಪಾಡಬೇಕು. ಸದರಿ ಸ್ಥಳದಲ್ಲಿ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ ಶಾಶ್ವತ ಪರಿಹಾರವನ್ನು ಹುಡುಕಿ ಇರುವ ಸಮಸ್ಯೆಯನ್ನು ಬಗೆಹರಿಸಲು ರಾಜಕಾಲುವೆ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ವಲಯ ಆಯುಕ್ತರಾದ ರಮೇಶ್, ಮುಖ್ಯ ಅಭಿಯಂತರರಾದ ಲೋಕೇಶ್, ಉಪ ಆಯುಕ್ತರಾದ ಶಶಿಕುಮಾರ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.