ಪೂರ್ವ ವಲಯ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಬೇ ಬಾಕಿ ಉಳಿಸಿಕೊಂಡಿರುವ ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಲಾಗುತ್ತಿದೆ ಎಂದು ವಲಯ ಆಯುಕ್ತರಾದ ಸ್ನೇಹಲ್ ರವರು ತಿಳಿಸಿದರು.
ಪೂರ್ವ ವಲಯ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬರುವ ಮಿಟ್ಟಲ್ ಟವರ್ಸ್ ನಲ್ಲಿ ಇಂದು ಬಾಕಿ ಆಸ್ತಿ ತೆರಿಗೆ ಪಾವತಿಸದ ಗೋಯಲ್ ಆಸ್ತಿಗೆ ಭೇಟಿ ನೀಡಿ ಬೀಗ ಮುದ್ರೆ ಹಾಕಲು ಮುಂದಾದಾಗ, ಆಸ್ತಿ ಮಾಲೀಕರು ಬಾಕಿಯಿದ್ದ ರೂ.17,42,412 ಗಳ ಆಸ್ತಿ ತೆರಿಗೆಯನ್ನು ಕೂಡಲೆ ಪಾವತಿಸಲಾಗಿದೆ ಎಂದು ಹೇಳಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ವಿಭಾಗವಾರು ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಗೆ ನೋಟೀಸ್ ಗಳನ್ನು ಜಾರಿ ಮಾಡಲಾಗಿದ್ದು, ಸಾಕಷ್ಟು ಸಮಯಾವಕಾಶವನ್ನು ನೀಡಿದ್ದರೂ ಕೂಡಾ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕಾರಣ ವಾಣಿಜ್ಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಿ ಬಾಕಿ ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪರಿಷ್ಕರಣೆ ಪ್ರಕಟಣ ಹಾಗೂ ಹೆಚ್ಚು ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ 10 ಆಸ್ತಿಗಳಿಗೆ ಖುದ್ದಾಗಿ ಭೇಟಿ ನೀಡಿ ಬಾಕಿ ಆಸ್ತಿ ವಸೂಲಿ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಪೂರ್ವ ವಲಯ ವ್ಯಾಪ್ತಿಯಲ್ಲಿ 2418 ಪರಿಷ್ಕರಣೆ ಪ್ರಕರಣಗಳ ಆಸ್ತಿಗಳಿಂದ ಸುಮಾರು 66 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ಬರಬೇಕಿದೆ. 32,584 ಸುಸ್ತಿದಾರರಿಂದ 61.76 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ಬರಬೇಕಿದೆ. ಅಭಿಯಾನದ ಮೂಲಕ ಹಂತ-ಹಂತವಾಗಿ ಎಲ್ಲಾ ಆಸ್ತಿಗಳಿಂದ ಬಾಕಿ ಆಸ್ತಿ ತೆರಿಗೆ ಸಂಗ್ರಹಿಸಲಾಗುವುದೆಂದು ತಿಳಿಸಿದರು.
ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡವರಿಗೆ ನೋಟೀಸ್ ನೀಡಿದ ಬಳಿಕ ಸಾಕಷ್ಟು ಸಮಯಾವಕಾಶವನ್ನು ನೀಡಲಾಗುತ್ತಿದೆ. ಆದರೂ ಪಾವತಿ ಮಾಡಿಲ್ಲವೆಂದರೆ ಅಟ್ಯಾಚ್ಮೆಂಟ್ ಆರ್ಡರ್ ನೀಡಲಾಗುತ್ತದೆ. ಅದಕ್ಕೂ ಸ್ಪಂದಿಸಿಲ್ಲವೆಂದರೆ ವಸತಿಯೇತರ ಆಸ್ತಿಗಳಿಗೆ ಬೀಗ ಮುದ್ರೆ ಹಾಕಲಾವುದೆಂದು ಹೇಳಿದರು.
ಈ ವೇಳೆ ವಲಯ ಜಂಟಿ ಆಯುಕ್ತರಾದ ಸರೋಜಾ, ಕಂದಾಯ ಅಧಿಕಾರಿ ಪ್ರಕಾಶ್, ಸಹಾಯಕ ಕಂದಾಯ ಅಧಿಕಾರಿಯಾದ ಕೃಷ್ಣಮೂರ್ತಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.