ಬೆಂಗಳೂರು: ರಾಜ್ಯ ಸರ್ಕಾರ ಬಿ ಖಾತಾದಿಂದ ಎ ಖಾತಾ ಮಾಡುವ ಯೋಜನೆ ಎನ್ನುವುದು ಬರೀ ಬೋಗಸ್. ಇದು ಜನರನ್ನು ಮೋಸ ಮಾಡುವ ಬಹುದೊಡ್ಡ ಲೂಟಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರವನ್ನು ಟೀಕಿಸಿದ್ದಾರೆ..
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದು ಸರ್ಕಾರದ 6ನೇ ಗ್ಯಾರಂಟಿ , ಜನತೆಗೆ ಟೋಪಿ ಹಾಕುವ ಯೋಜನೆ, ಈ ಯೋಜನೆಯಿಂದ ಜನರಿಗೆ ಅನುಕೂಲಕ್ಕಿಂತ ಹೊರೆಯೇ ಹೆಚ್ಚಾಗಲಿದೆ ಎಂದು ಆರೋಪಿಸಿದರು.
ಐದು ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಪಕ್ಷ ಈಗಾಗಲೇ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದೆ. ಈಗ A-ಖಾತಾ B-ಖಾತಾದಲ್ಲಿ ಜನರನ್ನು ಲೂಟಿ ಮಾಡಲು ಮುಂದಾಗಿದ್ದಾರೆ. ಬೆಸ್ಕಾಂನಲ್ಲಿ 3–4 ಲಕ್ಷ ಅರ್ಜಿಗಳು ಬಂದಿವೆ ಎಂದು ಹೇಳುತ್ತಾರೆ. ಆದರೆ ಇದರಿಂದ ಜನರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ಸರ್ಕಾರ ಶೇಕಡಾ 5ರಷ್ಟು ಹೆಚ್ಚುವರಿ ಶುಲ್ಕ ಹೇರುತ್ತಿದೆ. ಇದು ಜನರಿಗೆ ಹೊರೆಯಾಗಲಿದೆ, ನಾನು ಓಪನ್ ಆಗಿಯೇ ಹೇಳುತ್ತಿದ್ದೀನಿ, ಇನ್ನೆರಡು ವರ್ಷ ಸುಮ್ನಿರಿ, ಎ ಖಾತಾ, ಬಿ ಖಾತಾದ ಮೋಸದ ಬಲೆಗೆ ಬೀಳಬೇಡಿ ಎಂದರು.
ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಜನರನ್ನು ಸುಲಿಗೆ ಸರಕನ್ನಾಗಿ ಮಾಡಿಕೊಂಡಿದೆ. ಬೆಂಗಳೂರು ಜನರಿಗೆ ನಾನು ಹೇಳಲು ಬಯಸುತ್ತೇನೆ. ಯಾವುದೇ ಕಾರಣಕ್ಕೂ ಒಂದು ನಯಾಪೈಸೆ ಕಟ್ಟಬೇಡಿ. ಯಾವುದೇ ಕಾರಣಕ್ಕೂ ಎರಡು ವರ್ಷ ಖಾತೆ ಮಾಡಿಸಿಕೊಳ್ಳಬೇಡಿ. ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನು ಉಳಿಸುವ, ನಿಮ್ಮ ಹಿತ ಕಾಯುವ ಜವಾಬ್ದಾರಿ ನಮ್ಮದು ಎಂದು ಬೆಂಗಳೂರು ಜನತೆಗೆ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಜನತೆ ಆತಂಕಕ್ಕೆ ಒಳಗಾಗಬೇಕಿಲ್ಲ. ಎರಡು ವರ್ಷ ಆದ ಮೇಲೆ ನಮ್ಮ ಮೈತ್ರಿ ಸರ್ಕಾರ ಬರುತ್ತದೆ. ಆಗ ಅತ್ಯಂತ ಸರಳವಾಗಿ, ಸುಲಭವಾಗಿ ಖಾತೆ ಮಾಡಿಕೊಡುತ್ತೇವೆ. ನಿಮಗೆ ಯಾವುದೇ ಹಣಕಾಸಿನ ಹೊರೆ ಆಗುವುದಿಲ್ಲ. ಈಗಾಗಲೇ ಆಸ್ತಿ ಸಂಪಾದನೆ ಮಾಡಲು ಸಾಲ ಮಾಡಿ ಬಡ್ಡಿ ಕಟ್ಟುತ್ತಿದ್ದೀರಿ. ಈಗ ಮತ್ತೊಮ್ಮೆ ಈ ಎ ಖಾತಾ ಮಾಡಿಸಲು ಲಕ್ಷಾಂತರ ರೂಪಾಯಿ ಸಾಲ ಮಾಡಬೇಡಿ. ಇನ್ನೊಮ್ಮೆ ಸಾಲದ ಸುಳಿಗೆ ಸಿಕ್ಕಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಅವರು ಜನರನ್ನು ಕೋರಿದರು.
ಬಿ ಖಾತಾ ಸಮಸ್ಯೆ 1995ರಿಂದಲೂ ಇದೆ. 1997ರಲ್ಲಿ ಈ ಬಗ್ಗೆ ಆದೇಶ ಹೊರಬಂದಿತ್ತು. ನಮ್ಮ ಆಡಳಿತದಲ್ಲಿ ನಗರಾಭಿವೃದ್ಧಿಗೆ ಹಲವಾರು ಕ್ರಮ ಕೈಗೊಂಡಿದ್ದೇವೆ. 7 ನಗರಸಭೆಗಳನ್ನು 9ಕ್ಕೆ ಏರಿಸಿದ್ದೇವೆ, 68 ವಾರ್ಡ್‌ಗಳನ್ನು 98ಕ್ಕೆ ವಿಸ್ತರಿಸಿದ್ದೇವೆ, 110 ಹಳ್ಳಿಗಳನ್ನು ಬಿಬಿಎಂಪಿಗೆ ಸೇರಿಸಿದ್ದೇವೆ. ಐದು ವರ್ಷಗಳಲ್ಲಿ ಸುಮಾರು 25 ಸಾವಿರ ಕೋಟಿ ಅನುದಾನ ತಂದಿದ್ದೆವು ಎಂದರು.


