ನವದೆಹಲಿ: ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ನಡೆಸಿದ ‘ಆಪರೇಷನ್ ಸಿಂಧೂರ್’ ಮಿಲಿಟರಿ ಕಾರ್ಯಾಚರಣೆಯನ್ನು ಬೆಂಬಲಿಸಿದ ವಿಚಾರದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತೆ ಅಬ್ಬರಿಸಿದ್ದಾರೆ. “ಈ ವಿಷಯದಲ್ಲಿ ನಾನು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ರಾಷ್ಟ್ರೀಯ ಭದ್ರತೆಯ ವಿಷಯ ಬಂದಾಗ ಭಾರತವೇ ಮೊದಲು, ರಾಜಕೀಯ ಪಕ್ಷಗಳು ಆಮೇಲೆ,” ಎನ್ನುವ ಮೂಲಕ ತಮ್ಮದೇ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರೂ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಏನಿದು ‘ಆಪರೇಷನ್ ಸಿಂಧೂರ್’ ವಿವಾದ?
2025ರ ಮೇ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಕಾಂಗ್ರೆಸ್ ಈ ಕಾರ್ಯಾಚರಣೆಯನ್ನು ಸಂಸತ್ತಿನಲ್ಲಿ ವಿರೋಧಿಸುವಂತೆ ತನ್ನ ಸಂಸದರಿಗೆ ಸೂಚಿಸಿತ್ತು. ಶಶಿ ತರೂರ್ ಅವರು ಕೇಂದ್ರದ ಈ ಕ್ರಮವನ್ನು ಶ್ಲಾಘಿಸಿದ್ದಲ್ಲದೆ, ಜಗತ್ತಿಗೆ ಪಾಕಿಸ್ತಾನದ ಭಯೋತ್ಪಾದನೆಯನ್ನು ಮನವರಿಕೆ ಮಾಡಿಕೊಡಲು ಕೇಂದ್ರ ಸರ್ಕಾರ ಕಳುಹಿಸಿದ್ದ ಸರ್ವಪಕ್ಷ ನಿಯೋಗದ ನೇತೃತ್ವವನ್ನೂ ವಹಿಸಿದ್ದರು. ಇದು ಕಾಂಗ್ರೆಸ್ ಹೈಕಮಾಂಡ್‌ನ ಅಸಮಾಧಾನಕ್ಕೆ ಕಾರಣವಾಗಿತ್ತು.
ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ತರೂರ್, ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿಲ್ಲ, ಭಯೋತ್ಪಾದನೆಯನ್ನು ನಿಗ್ರಹಿಸಲು ಅಲ್ಲಿನ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದೇವೆ. ನಮ್ಮ ಯುದ್ಧ ಇರುವುದು ಭಯೋತ್ಪಾದಕರ ಮೇಲೆ ಮಾತ್ರ,” ಎಂದು ತಾವು ಬರೆದ ‘ಆಫ್ಟರ್ ಪಹಲ್ಗಮ್’ ಲೇಖನವನ್ನು ಸ್ಮರಿಸಿದರು.
ಭಾರತ ಸತ್ತರೆ ಯಾರು ಬದುಕುತ್ತಾರೆ? (Who lives if India dies?) ಎಂಬ ನೆಹರು ಅವರ ಮಾತಿನಂತೆ, ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಪಕ್ಷಕ್ಕಿಂತ ದೇಶವೇ ದೊಡ್ಡದು. ಭಾರತದ ಹಿತಾಸಕ್ತಿ ಬಂದಾಗ ರಾಜಕೀಯ ಭಿನ್ನಾಭಿಪ್ರಾಯಗಳು ಗೌಣವಾಗುತ್ತವೆ,” ಎಂದು ಮಾರ್ಮಿಕವಾಗಿ ನುಡಿದರು.
ತಾವು ಕಾಂಗ್ರೆಸ್‌ನ ಯಾವುದೇ ಅಧಿಕೃತ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡ ಅವರು, ಸಾರ್ವಜನಿಕವಾಗಿ ತತ್ವದ ಬಗ್ಗೆ ಭಿನ್ನಾಭಿಪ್ರಾಯವಿರುವ ಏಕೈಕ ವಿಷಯವೆಂದರೆ ಅದು ‘ಆಪರೇಷನ್ ಸಿಂಧೂರ್’ ಮಾತ್ರ. ಇದಕ್ಕಾಗಿ ನಾನು ಎಂದಿಗೂ ವಿಷಾದ ವ್ಯಕ್ತಪಡಿಸುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿದ್ದಾರೆ.


