Apple and iPhone updates: ಆ್ಯಪಲ್ ಸ್ಟೋರ್ಗಳ ಸಂಖ್ಯೆ ಭಾರತದಲ್ಲಿ ಮುಂದಿನ ವರ್ಷದೊಳಗೆ ಆರಕ್ಕೆ ಏರಲಿದೆ. 2023ರ ಏಪ್ರಿಲ್ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಎರಡು ಆ್ಯಪಲ್ ಸ್ಟೋರ್ಸ್ ಆರಂಭವಾಗಿತ್ತು. 2025ರಲ್ಲಿ ಬೆಂಗಳೂರು ಸೇರಿದಂತೆ ಇನ್ನೂ ನಾಲ್ಕು ಕಡೆ ಆ್ಯಪಲ್ ಸ್ಟೋರ್ಸ್ ತೆರೆಯಲಾಗುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ. ಹಾಗೆಯೇ, ಈ ತಿಂಗಳಿಂದಲೇ ಐಫೋನ್ ಪ್ರೋ ಮತ್ತು ಪ್ರೋ ಮ್ಯಾಕ್ಸ್ ಫೋನ್ಗಳ ಉತ್ಪಾದನೆ ಭಾರತದಲ್ಲೇ ಆರಂಭವಾಗಲಿದೆ ಎನ್ನಲಾಗುತ್ತಿದೆ.
ನವದೆಹಲಿ, ಅಕ್ಟೋಬರ್ 4: ಆ್ಯಪಲ್ ಸಂಸ್ಥೆ ಭಾರತೀಯ ಮಾರುಕಟ್ಟೆ ಮತ್ತು ತಯಾರಕಾ ವ್ಯವಸ್ಥೆಯತ್ತ ಗಮನ ಹರಿಸುತ್ತಿರುವುದು ಹೆಚ್ಚಾಗುತ್ತಿದೆ. ಕಳೆದ ವರ್ಷ ಭಾರತದಲ್ಲಿ ಎರಡು ರೀಟೇಲ್ ಸ್ಟೋರ್ಗಳನ್ನು ತೆರೆದಿದ್ದ ಆ್ಯಪಲ್ ಇದೀಗ ಇನ್ನೂ ನಾಲ್ಕು ಸ್ಟೋರ್ಸ್ (Apple Stores) ಆರಂಭಿಸಲು ಯೋಜಿಸಿದೆ. ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ನಾಲ್ಕು ಕಡೆ ಹೊಸ ಆ್ಯಪಲ್ ಸ್ಟೋರ್ಗಳು ಆರಂಭವಾಗಲಿವೆ. ಮುಂದಿನ ವರ್ಷ ಬೆಂಗಳೂರು, ಪುಣೆ, ಮುಂಬೈ ಮತ್ತು ದೆಹಲಿಯಲ್ಲಿ ನಾಲ್ಕು ರೀಟೇಲ್ ಮಳಿಗೆಗಳು ಶುರುವಾಗಲಿವೆ. ಕಳೆದ ವರ್ಷದ ಏಪ್ರಿಲ್ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಸ್ಟೋರ್ಸ್ ಆರಂಭವಾಗಿದ್ದವು. ಈಗ ಇವೆರಡು ನಗರಗಳಿಗೆ ಮತ್ತೊಂದು ಆ್ಯಪಲ್ ಸ್ಟೋರ್ ಸಿಗಲಿದೆ.
‘ಭಾರತದಾದ್ಯಂತ ಗ್ರಾಹಕರ ಸ್ಪಂದನೆಯಿಂದ ಉತ್ಸಾಹಿತಗೊಂಡಿರುವ ನಾವು ಇನ್ನಷ್ಟು ಸ್ಟೋರ್ಗಳನ್ನು ತೆರೆಯಲು ಯೋಜಿಸಿದ್ದೇವೆ. ಅದಕ್ಕಾಗಿ ನಮ್ಮ ತಂಡಗಳನ್ನು ಕಟ್ಟುತ್ತಿದ್ದೇವೆ. ನಮ್ಮ ಅದ್ಭುತ ಉತ್ಪನ್ನಗಳು ಮತ್ತು ಸೇವೆಗಳನ್ನು ಖುದ್ದಾಗಿ ಕಂಡು ಅನುಭವಿಸಲು ಮತ್ತು ನಮ್ಮ ಅಸಾಧಾರಣ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು ಗ್ರಾಹಕರಿಗೆ ಇನ್ನಷ್ಟು ಅವಕಾಶ ನೀಡಲು ತುದಿಗಾಲಲ್ಲಿ ಇದ್ದೇವೆ’ ಎಂದು ಆ್ಯಪಲ್ನ ರೀಟೇಲ್ ವಿಭಾಗದ ಹಿರಿಯ ಉಪಾಧ್ಯಕ್ಷ ಡೇರ್ಡ್ರೇ ಓಬ್ರಿಯಾನ್ ಇಂದು ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಐಫೋನ್ 16 ಪ್ರೋ, ಪ್ರೋ ಮ್ಯಾಕ್ಸ್ ಉತ್ಪಾದನೆ ಭಾರತದಲ್ಲೇ…
ಆ್ಯಪಲ್ ಸಂಸ್ಥೆಯ ಐಫೋನ್ 16 ಸರಣಿಯ ಎಲ್ಲಾ ಸ್ಮಾರ್ಟ್ಫೋನ್ಗಳನ್ನೂ ಭಾರತದಲ್ಲಿ ತಯಾರಿಸಲು ನಿರ್ಧರಿಸಲಾಗಿದೆ. ಐಫೋನ್ ಸರಣಿಯ ಹೈ ಎಂಡ್ ಅವತರಣಿಕೆಗಳಾದ ಪ್ರೋ ಮತ್ತು ಪ್ರೋ ಮ್ಯಾಕ್ಸ್ ಅನ್ನು ಬೇರೆ ಕಡೆ ತಯಾರಿಸಿ ಭಾರತಕ್ಕೆ ತರಲಾಗುತ್ತಿದೆ. ಈಗ ಇವೂ ಕೂಡ ಭಾರತದಲ್ಲೇ ತಯಾರಾಗಲಿದೆ.