ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹಾಗೂ ಇತರ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ದೂರು ದಾಖಲಿಸಿದ್ದು, ಪಕ್ಷದ ಮೊದಲ ಕುಟುಂಬವು ವೈಯಕ್ತಿಕ ಲಾಭಕ್ಕಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ..
ರಾಹುಲ್ ಮತ್ತು ಸೋನಿಯಾ ಜೊತೆಗೆ, ಇತರ ಆರು ವ್ಯಕ್ತಿಗಳು ಮತ್ತು ಮೂರು ಕಂಪನಿಗಳನ್ನು ಸಹ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. 2,000 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಕಾಂಗ್ರೆಸ್ ನಿಯಂತ್ರಿತ ಕಂಪನಿಯಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಅನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಳ್ಳಲು ಕ್ರಿಮಿನಲ್ ಪಿತೂರಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
2008-2024ರವರೆಗಿನ ನ್ಯಾಷನಲ್ ಹೆರಾಲ್ಡ್ ಹಣ ದುರುಪಯೋಗ ಪ್ರಕರಣದ ತನಿಖೆ ನಡೆಸಿದ ಕಾನೂನು ಜಾರಿ ನಿರ್ದೇಶನಾಲಯದ ಹೆಡ್ಕಾಟ್ರಸ್ ಇನ್ವೆಸ್ಟಿಗೇಟಿವ್ ಯುನಿಟ್ ನೀಡಿದ ದೂರಿನ ಮೇರೆಗೆ ಅಕ್ಟೋಬರ್ 3ರಂದು ಈ ಎಫ್‌ಐಆರ್ ದಾಖಲಾಗಿದೆ. ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 66(2)ರ ಅನ್ವಯ ಕಾನೂನು ಜಾರಿ ನಿರ್ದೇಶನಾಲಯವು ನಿಗದಿತ ಅಪರಾಧಗಳ ಬಗ್ಗೆ ಪ್ರಕರಣ ನೋಂದಾಯಿಸಿಕೊಳ್ಳಲು ಹಾಗೂ ತನಿಖೆ ನಡೆಸಲು ಇತರ ಕಾನೂನು ಜಾರಿ ಸಂಸ್ಥೆಗಳ ಬಳಿ ತನಿಖೆಯ ವಿವರಗಳನ್ನು ಹಂಚಿಕೊಳ್ಳಲು ಅವಕಾಶವಿದೆ.
ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ನೀಡಿದ ಖಾಸಗಿ ದೂರಿನ ಬಗ್ಗೆ ಮತ್ತು ಪಾಟಿಯಾಲಾ ಹೌಸ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2014ರಲ್ಲಿ ನೀಡಿದ ಸೂಚನೆ ಮೇರೆಗೆ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ಏಪ್ರಿಲ್ 9ರಂದು ಪಿಎಂಎಲ್‌ಎ ಕಾಯ್ದೆಯಡಿ ರೋಸ್ ಅವೆನ್ಯೂ ಎಂಪಿ/ಎಂಎಲ್‌ಎ ಕೋರ್ಟ್ನಲ್ಲಿ ಸೋನಿಯಾ-ರಾಹುಲ್ ವಿರುದ್ಧ ಏಪ್ರಿಲ್ 9ರಂದು ಆರೋಪಪಟ್ಟಿ ಸಲ್ಲಿಸಿತ್ತು. ಆದರೆ ಇದನ್ನು ನ್ಯಾಯಾಲಯ ಇನ್ನೂ ಪರಿಗಣಿಸಿಲ್ಲ.


