ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ನಿಧನರಾದ ಸುದ್ದಿ ತಿಳಿದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಮೋದಿ ಅವರು ಸುದೀಪ್ ಅವರಿಗೆ ಸಾಂತ್ವನದ ಪತ್ರ ಬರೆದಿದ್ದು, ಅದರ ಪ್ರತಿಯನ್ನು ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ದುಃಖದ ಸಮಯದಲ್ಲಿ ಸುದೀಪ್ ಅವರು ಸಿನಿಮಾ ಮತ್ತು ಬಿಗ್ ಬಾಸ್ ಕಾರ್ಯಕ್ರಮಗಳಿಂದ ವಿರಾಮ ಪಡೆದಿದ್ದಾರೆ.
ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾದರು. ಅವರ ಅಗಲಿಕೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅ.20ರಂದು ಮುಂಜಾನೆ ಸರೋಜಾ ಸಂಜೀವ್ ಅವರು ಕೊನೆಯುಸಿರು ಎಳೆದರು. ತಾಯಿಯನ್ನು ಕಳೆದುಕೊಂಡು ನೋವಿನಲ್ಲಿ ಇರುವ ಸುದೀಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನದ ನುಡಿಗಳನ್ನು ತಿಳಿಸಿದ್ದಾರೆ. ಪತ್ರದ ಮೂಲಕ ಮೋದಿ ಧೈರ್ಯ ತುಂಬಿದ್ದಾರೆ. ಆ ಪತ್ರದ ಪ್ರತಿಯನ್ನು ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.
‘ನಿಮ್ಮ ತಾಯಿ ಸರೋಜಾ ಸಂಜೀವ್ ಅವರ ನಿಧನದ ಸುದ್ದಿ ತಿಳಿದು ನನಗೆ ತೀವ್ರ ನೋವಾಗಿದೆ. ತಾಯಿಯ ಅಗಲಿಕೆಯಿಂದ ಆದ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಅವರ ಜೊತೆ ನಿಮಗೆ ಇದ್ದ ಬಾಂಧವ್ಯ ಹಾಗೂ ಅವರ ಪರಿಣಾಮ ನಿಮ್ಮ ಮೇಲೆ ಎಷ್ಟಿತ್ತು ಎಂಬುದನ್ನು ಈಗ ನಿಮ್ಮ ದುಃಖವೇ ಹೇಳುತ್ತಿದೆ. ನೆನಪುಗಳ ಮೂಲಕ ಅವರು ಶಾಶ್ವತವಾಗಿ ಇರಲಿದ್ದಾರೆ’ ಎಂದು ಮೋದಿ ಅವರು ಪತ್ರದಲ್ಲಿ ಬರೆದಿದ್ದಾರೆ.
‘ಈ ಕಷ್ಟದ ಸಂದರ್ಭದಲ್ಲಿ ನಾನು ನಿಮಗೆ ಸಂತಾಪ ಸೂಚಿಸುತ್ತೇನೆ. ನಿಮಗಾಗಿ ಮತ್ತು ನಿಮ್ಮ ಹಿತೈಷಿಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ನೋವನ್ನು ಭರಿಸುವ ಶಕ್ತಿ ನಿಮಗೆ ಸಿಗಲಿ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪತ್ರವನ್ನು ಪೂರ್ಣಗೊಳಿಸಿದ್ದಾರೆ. ಸುದೀಪ್ ಅವರು ಈ ಪತ್ರದ ಪ್ರತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
‘ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರೇ.. ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ’ ಎಂದು ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ತಿಳಿಸಿದ್ದಾರೆ.