ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲಾಲ್ ವಿವಾದ ತಾರಕಕ್ಕೇರಿತ್ತು. ಬಿಜೆಪಿಯ ಕೆಲವು ನಾಯಕರು ಹಲಾಲ್ ವಿವಾದದ ಬಗ್ಗೆ ನೀಡಿದ್ದ ಪ್ರತಿಕ್ರಿಯೆ ಸದ್ದು ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಈ ವಿವಾದ ತಲೆ ಎತ್ತುವ ಸಾಧ್ಯತೆ ಇದೆ. ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಈ ನಿಟ್ಟಿನಲ್ಲಿ ಸರ್ಕಾರದ ನಿಲುವಿನ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ.
ವಿಧಾನಪರಿಷತ್‌ನಲ್ಲಿ ಚುಕ್ಕೆ ಗುರುತಿಲ್ಲದ ಪ್ರಶ್ನೆಯನ್ನು ಕೇಳಿರುವ ಅವರು, ಹಲಾಲ್ ಪ್ರಮಾಣಿಕೃತ ಆಹಾರವನ್ನು ಮಾರಾಟ ಮಾಡುವವರು ತಮ್ಮ ಮಳಿಗೆಯ ಹೊರಗೆ ಸಾರ್ವಜನಿಕರಿಗೆ ತಿಳಿಯುವ ರೀತಿಯಲ್ಲಿ ಹಲಾಲ್ ಎಂದರೆ ಏನು ಎಂಬುದರ ಕುರಿತಾಗಿ ಸ್ಪಷ್ಡ ಮಾಹಿತಿಯನ್ನು ಜಾಹೀರಾತು ರೂಪದಲ್ಲಿ ಪ್ರದರ್ಶಿಸುವ ಬಗ್ಗೆ ಸರ್ಕಾರದ ನಿಲುವ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಕುರಿತಾಗಿ ಯಾವಾಗ ಆದೇಶ ಹೊರಡಿಸಲಿದೆ? ಎಂಬುವುದುನ್ನು ಅವರು ಪ್ರಶ್ನಿಸಿದ್ದಾರೆ.
ಇಷ್ಟೇ ಅಲ್ಲ, ರಾಜ್ಯದಲ್ಲಿ ಹಲಾಲ್ ಪ್ರಮಾಣ ಪತ್ರವನ್ನು ಸರ್ಕಾರವು ನೀಡುತ್ತಿದೆಯೇ? ಅದಕ್ಕಾಗಿ ಪ್ರತ್ಯೇಕ ಇಲಾಖೆಯನ್ನು ರಚಿಸಲಾಗಿದೆಯೇ? ಹಲಾಲ್ ಪ್ರಮಾಣಿಕೃತ ಆಹಾರ ಎಂಬುದಾಗಿ ಜಾಹೀರಾತು ನೀಡಿ ಮಾರಾಟ ಮಾಡುವ ವಸ್ತುಗಳ ಕುರಿತಾಗಿ ಸರ್ಕಾರದ ನಿಲುವು ಏನು ಎಂದೂ ಅವರು ಪ್ರಶ್ನಿಸಿದ್ದಾರೆ.
ವಿಶೇಷ ತೆರಿಗೆ ಸಂಗ್ರಹದ ಬಗ್ಗೆ ನಿಲುವೇನು?
ಇನ್ನು ಹಲಾಲ್ ಪ್ರಮಾಣಿಕೃತ ಆಹಾರವನ್ನು ಮಾರಾಟ ಮಾಡುವುದರಿಂದ ವಿಶೇಷ ತೆರಿಗೆ ಸಂಗ್ರಹ ಮಾಡುವ ಕುರಿತಾಗಿ ಸರ್ಕಾರದ ನಿಲುವು ಏನು ಎಂಬುವುದನ್ನು ಇದೇ ಸಂದರ್ಭದಲ್ಲಿ ಎನ್ ರವಿಕುಮಾರ್ ಪ್ರಶ್ನಿಸಿದ್ದಾರೆ.
ಸರ್ಕಾರ ಕೊಟ್ಟ ಉತ್ತರವೇನು?
ಇನ್ನು ಎನ್ ರವಿಕುಮಾರ್ ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಉತ್ತರ ನೀಡಿದ್ದು ಮಾತ್ರ ಕುತೂಹಲ ಕೆರಳಿಸಿದೆ. ಎನ್ ರವಿಕುಮಾರ್ ಪ್ರಶ್ನೆಗೆ ಉತ್ತರ ‘ಅನ್ವಯಿಸುದಿಲ್ಲ’ ಎಂಬುದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲಾಲ್ ಜಟ್ಕಾ ಭಾರೀ ಚರ್ಚೆಗೆ ಕಾರಣವಾಗಿತ್ತು. ಚುನಾವಾಣೆಯಲ್ಲೂ ಇದು ಪ್ರಮುಖ ಚರ್ಚಾ ವಿಚಾರವಾಗಿತ್ತು. ಆದರೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾದ ಕಾರಣದಿಂದಾಗಿ ಇಂತಹ ವಿವಾದಗಳಿಂದ ಸ್ವಲ್ಪ ದೂರ ಉಳಿದುಕೊಳ್ಳಲು ಬಿಜೆಪಿ ನಿರ್ಧಾರ ಮಾಡಿದಂತಿದೆ. ಆದರೆ ಇದೀಗ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಈ ಕುರಿತಾಗಿ ಪ್ರಶ್ನೆ ಎತ್ತಿದ್ದಾರೆ.